26.7 C
Udupi
Friday, March 14, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 102

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೦೩ ಮಹಾಭಾರತ

ಆ ದಿನ ರಾತ್ರಿಯಿಂದಲೇ ಸಂಭ್ರಮ, ಷಡ್ರಸ ಭೋಜನದ ತಯಾರಿಯೂ ನಡೆಯತೊಡಗಿತು. ಮನೆಯ ಯಜಮಾನ ಬ್ರಾಹ್ಮಣ ಭೀಮನಿಗೆ ಬಕಾಸುರನ ವಧೆಯ ಶ್ರೇಯಸ್ಸಿಗಾಗಿ ಈ ಊರಿನ ಮಹಾರಾಜನಾಗುವ ಯೋಗ್ಯತೆ ಇದೆ ಎಂದಾಗ ಕುಂತಿ ಮತ್ತೆ ತನ್ನ ಮಾತು – ಹಾಗೂ ಈ ವಿಚಾರವನ್ನು ಗುಟ್ಟಾಗಿ ಉಳಿಸಬೇಕೆಂದು ಹೇಳಿದ್ದ ನಿರ್ಬಂಧ ನೆನಪಿಸಿದಳು. ಮರುದಿನ ಸೂರ್ಯೋದಯವಾಗುವ ಹೊತ್ತಿಗೆ ಏಕಚಕ್ರ ನಗರದಲ್ಲೆಲ್ಲಾ ಜನ ಓಡಾಡುತ್ತಿದ್ದಾರೆ. ಮೊದಲು ರಕ್ಕಸ ಊರ ದ್ವಾರದ ಬಳಿ ಇದ್ದಾನೆಂದೂ, ಮತ್ತೆ ತುಸು ಹೊತ್ತಲ್ಲೇ ಅದು ಸತ್ತ ರಕ್ಕಸನ ಹೆಣವೆಂದೂ ಸುದ್ದಿಯಾಗಿತ್ತು. ಬಕಾಸುರನ ಮರಣ ಸಿಹಿಸುದ್ದಿಯಾಗಿ ಎಲ್ಲೆಲ್ಲೂ ಸಂಭ್ರಮ. ಹಿಂದಿನ ದಿನ ಬಕನ ಆಹಾರವಾಗ ಬೇಕಾಗಿದ್ದ ಬ್ರಾಹ್ಮಣ ಜನರಿಗೆ ಈ ವಿಚಾರದಲ್ಲಿ ಉತ್ತರಿಸಬೇಕಾಗಿತ್ತು. ಕಾರಣ ಅವನ ಮನೆಯವರಾರು ರಕ್ಕಸನಿಗೆ ಆಹಾರವಾಗದೆ ಜೀವಂತ ಉಳಿದಿದ್ದಾರೆ. ಮನೆಯ ಯಜಮಾನ ಬ್ರಾಹ್ಮಣನ ಮನೆಯ ಮುಂದೆ ಜನಸಾಗರ. “ಹೇಗಾಯಿತು? ಏನಾಯಿತು? ಯಾರು – ಹೇಗೆ ಕೊಂದರು?” ಪ್ರಶ್ನೆಗಳ ಸುರಿಮಳೆ. ಬ್ರಾಹ್ಮಣ ಯೋಚಿಸಿ ಉತ್ತರ ನೀಡತೊಡಗಿದ. “ಸರತಿಯಂತೆ ರಕ್ಕಸನಿಗೆ ಆಹಾರವಾಗಲು ದುಃಖಿಸುವ ಹೊತ್ತು ಮಹಿಮಾನ್ವಿತ ಸಿದ್ದಿಪುರುಷರೊಬ್ಬರ ದರುಶನ ಭಾಗ್ಯ ಒದಗಿತು. ನನ್ನ ದುಃಖಕ್ಕೆ ಕಾರಣ ತಿಳಿದು ಪರಿಹರಿಸುವ ಅಭಯವಾಕ್ಯ ನುಡಿದರು. ಅವರ ಅದ್ಬುತ ಸಿದ್ಧಿ ಶಕ್ತಿಯಿಂದ ರಕ್ಕಸನನ್ನು ಹೊಡೆದುರುಳಿಸಿ ನಮ್ಮೂರಿಗೆ ಬಂದೊದಗಿದ್ದ ಆಪತ್ತು ನಿವಾರಿಸಿದರು. ಆ ಮಹಿಮಾನ್ವಿತನಿಂದ ನಮಗೆಲ್ಲ ಕ್ಷೇಮವಾಯಿತು” ಎಂದು ಹೇಳುತ್ತಿದ್ದಂತೆ ಊರಿನ ಜನರು ಅನಾಮಿಕ ಸಿದ್ದಿಪುರುಷನಿಗೆ ಜಯಕಾರ ಕೂಗುತ್ತಾ, ದೇವರಲ್ಲೂ ಪ್ರಾರ್ಥಿಸಿ ಹರಸತೊಡಗಿದರು. ಹೀಗೆ ಭೀಮನ ಸಾಹಸ ಕಥೆಯನ್ನು ಪ್ರಕಟಗೊಳ್ಳದಂತೆ ಜಾಗೃತೆವಹಿಸಿದ ಬ್ರಾಹ್ಮಣನೂ ನಿರುಮ್ಮಳನಾದ.

ಇತ್ತ ಪಾಂಚಾಲ ದೇಶದಲ್ಲಿ ದ್ರುಪದ ಮಹಾರಾಜನಿಗೆ ಹಸ್ತಿನೆಯ ವಿಚಾರದಲ್ಲಿ ವಿಶೇಷ ಆಸಕ್ತಿಯೂ, ಗುಪ್ತ ವಾರ್ತೆ ಪಡೆಯುವ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದನು. ಕಾರಣಗಳು ಹಲವು, ರಾಜತಾಂತ್ರಿಕವಾಗಿ ನೆರೆ ರಾಜ್ಯದ ನಡೆ ತಿಳಿಯುವುದು, ತನಗೆ ಅಪಮಾನ ಮಾಡಿದ ಮಿತ್ರ ದ್ರೋಣನ ವಿಚಾರ, ಹೀಗೆ ಇನ್ನೂ ಹಲವು ವಿಷಯಗಳಿದ್ದರೂ, ಪ್ರಧಾನವಾಗಿ ತನ್ನ ಪುತ್ರಿಯ ಹುಟ್ಟು ಆಗಿರುವುದು ಅರ್ಜುನನ ಪತ್ನಿಯಾಗಲೆಂದು. ಅಂತಹ ಅಪ್ರತಿಮ ಸಾಹಸಿ, ವೀರ ಅರ್ಜುನನ ಕೈಯಲ್ಲಿ ಸೋತಾಗ ದ್ರುಪದ ಯುದ್ದದ ಸೋಲಿನ ಜೊತೆಗೆ ಅರ್ಜುನನ ಪರಾಕ್ರಮಕ್ಕೆ ಮನಸೋತಿದ್ದನು. ಋತ್ವಿಜರಾದ ಯಾಜ ಉಪಯಾಜರ ಮುಖೇನ ಸಂಕಲ್ಪ ಸಂತಾನ ಪ್ರಾಪ್ತಿಯ ಯಾಗ ಮಾಡಿಸಿ ದ್ರೋಣ ವಧೆಗೆ ಪುತ್ರ, ಅರ್ಜುನನ ಕರಗ್ರಹಣ ಮಾಡಲು ಪುತ್ರಿಯನ್ನು ಬಯಸಿ ಯಾಗ ಮಾಡಿದ್ದನು. ಆ ಸಂಕಲ್ಪದಂತೆ ದೃಷ್ಟದ್ಯುಮ್ನ ಮತ್ತು ದ್ರೌಪದಿ ಯಾಗಾಗ್ನಿಯಿಂದ ಮೈದಳೆದು ಆವಿರ್ಭವಿಸಿ ಬಂದಿದ್ದರು.

ಇತ್ತೀಚೆಗೆ ಬಂದ ಸುದ್ದಿ ವಾರಣಾವತದ ಅರಮನೆಯ ಅಗ್ನಿದುರಂತದಲ್ಲಿ ಪಾಂಡವರೂ ಕುಂತಿಯೂ ಸಜೀವದಹನಗೊಂಡು ಅಪಮೃತ್ಯುವಿಗೀಡಾಗಿದ್ದಾರೆ. ಕೌರವರ ಕಪಟ ರಾಜಕಾರಣಕ್ಕೆ ಶಕುನಿಯ ತಂತ್ರಗಾರಿಕೆಗೆ ಪಾಂಡವರು ಬಲಿಯಾಗಿದ್ದಾರೆ. ಎಂದಷ್ಟೇ ತಿಳಿದು ಬರುತ್ತಿದೆ ಹೊರತು, ಎಷ್ಟೇ ಪ್ರಯತ್ನಿಸಿದರೂ ಪಾಂಡವರು ಬದುಕಿದ್ದಾರೆ ಎಂಬ ಸುದ್ದಿ ಎಲ್ಲಿಂದಲೂ ಬರುತ್ತಿಲ್ಲ. ಇದನ್ನು ಯಾವ ಕಾರಣಕ್ಕೂ ನಂಬದ ದ್ರುಪದ ಮತ್ತಷ್ಟು ಬೇಹುಗಾರಿಕೆ, ವಿಷಯ ಸಂಗ್ರಹ ಮಾಡಿಸುತ್ತಿದ್ದಾನೆ. ಕಾರಣ ಯಾಗ ಸಂಕಲ್ಪದಂತೆ ದೇವತಾನುಗ್ರಹದಿಂದ ದ್ರೌಪದಿಯನ್ನು ವರಿಸುವ ಅರ್ಜುನ ಸಾಯುವ ಸಾಧ್ಯತೆ ಇಲ್ಲ ಎನ್ನುವುದೇ ಆತನ ನಂಬಿಕೆ. ಆದರೂ ಪಾಂಡವರ ವಿಚಾರವಾಗಲೀ, ಅದರಲ್ಲೂ ಕನಿಷ್ಟ ಅರ್ಜುನನ ಸುದ್ದಿಯಾದರೂ ಸಿಗುತ್ತದೋ ಎಂಬ ಪ್ರಯತ್ನ ವ್ಯರ್ಥವೇ ಆಗುತ್ತಿದೆ. ಹಾಗಿದ್ದರೆ ನನ್ನ ಯಾಗ ಸಂಕಲ್ಪ ಸುಳ್ಳಾದೀತೆ? ಅಷ್ಟು ಸುಲಭದಲ್ಲಿ ಕೌರವರ ತಂತ್ರಕ್ಕೆ ಪಾಂಡವರು ಬಲಿಯಾದಾರೇ? ಇಲ್ಲ, ಅಸಂಭವ, ಯಾಕೆಂದರೆ ಅದ್ವಿತೀಯ ಜ್ಞಾನ, ಅಸಾಧಾರಣ ಪ್ರತಿಭೆ, ಅಪ್ರತಿಮ ಸಾಹಸಿಗರಾದ ಇವರನ್ನು ಸುಲಭದಲ್ಲಿ ಮುಗಿಸುವುದು ಅಸಾಧ್ಯ. ಇತ್ಯಾದಿಯಾಗಿ ಮಹಾರಾಜ ದ್ರುಪದ – ಪಾಂಡವರ ಕುರಿತು ತರ್ಕಿಸುತ್ತಿದ್ದಾನೆ. ಪ್ರಾಯಕ್ಕೆ ಬಂದ ತನ್ನ ಮಗಳ ಮದುವೆಯಾಗಲು ಅರ್ಜುನ ಸಿಗಬೇಕಲ್ಲಾ! ಏನು ಮಾಡೋಣ ಎಂಬ ಚಿಂತೆ ಆವರಿಸಿತು.

ಒಂದೊಮ್ಮೆಗೆ ಪಾಂಡವರು ಬದುಕಿದ್ದಾರೆ ಎಂಬ ನನ್ನ ನಿರೀಕ್ಷೆ ಸುಳ್ಳಾಗಿದ್ದರೆ? ನಿಜವಾಗಿಯೂ ಅವರು ಸತ್ತಿದ್ದರೆ! ನನ್ನ ಮಗಳ ಗತಿಯೇನು? ಮದುವೆ ಮಾಡಿಸುವುದು ಬೇಡವೇ? ಒಂದು ವೇಳೆ ನಾನು ಹಾಗೇ ಮುಂದುವರಿದು ಅರ್ಹ ರಾಜಕುಮಾರನನ್ನು ನೋಡಿ ಮದುವೆ ಮಾಡಿಸಿದ ಬಳಿಕ ಅರ್ಜುನ ಪ್ರಕಟನಾಗಿ ಬಂದರೆ? ಯಾಗ ಸಂಕಲ್ಪದಂತೆ ಬದುಕಿದ್ದರೆ! ಅಯ್ಯೋ ಈ ಒಗಟಿಗೆ ಉತ್ತರ ಹೇಗೆ? ಪರಿಹಾರವೇನು?

ಗೊಂದಲದಲ್ಲಿದ್ದ ದ್ರುಪದ ರಾಜಗುರುಗಳಾದ ಶತಾನಂದರನ್ನು ಕರೆಸಿ, ಮಂತ್ರಿಗಳ ಜೊತೆ ತನ್ನ ಮನದ ಸಂದಿಗ್ಧತೆಯ ಬಗ್ಗೆ ಸಮಲೋಚನೆ ನಡೆಸಿದ. ವಿಚಾರ ವಿನಿಮಯಗಳು ನಡೆದು ಕೊನೆಗೆ ದ್ರೌಪದಿಯ ವಿವಾಹಕ್ಕೆ ಯೋಗ್ಯ ವರನ ಆಯ್ಕೆಗಾಗಿ ಕ್ಷಾತ್ರ ವೀರರಿಗೆ ಸ್ವಯಂವರ ಪಣ ನಿಗದಿ ಪಡಿಸುವುದು, ವಿಶೇಷವಾಗಿ ಮತ್ಸ್ಯಯಂತ್ರ ಲಾಂಛನವನ್ನು ಜಲಬಿಂಬ ಆಧಾರವಾಗಿ ಭೇದಿಸಿ ಪಣ ಗೆದ್ದವನಿಗೆ ಮದುವೆ ಮಾಡಿಸುವುದು ಎಂಬ ತೀರ್ಮಾನವಾಯಿತು. ಈ ಪಣದ ಉದ್ದೇಶ ಅರ್ಜುನ ಬದುಕಿದ್ದು ಅವ್ಯಕ್ತನಾಗಿದ್ದರೆ – ಕ್ಷತ್ರಿಯನಾದ ಆತನನ್ನು ಈ ಸ್ಪರ್ಧಾ ಪಣ ಸೆಳೆದು ತರಬಲ್ಲುದು. ಮಾತ್ರವಲ್ಲ ಅಸಾಧಾರಣ ಕೌಶಲ್ಯವಂತ ಧನುರ್ಧಾರಿಗಳಷ್ಟೇ ಈ ಸಾಧನೆ ಮಾಡಬಲ್ಲರು. ಹೀಗೆ ನಿರ್ಧರಿಸಿ ದ್ರೌಪದಿಯ ಯೋಗ ಪರೀಕ್ಷೆಯೋ, ಅಥವಾ ಯಾಗ ಸಂಕಲ್ಪದ ಮೇಲಿರುವ ನಂಬಿಕೆಯೋ – ಅಂತೂ ದ್ರೌಪದಿಯ ವಿವಾಹಕ್ಕೆ ಸ್ವಯಂವರ ಘೋಷಿಸಲ್ಪಟ್ಟಿತು. ಪಾಂಚಾಲದಲ್ಲಿ ಹಬ್ಬದ ಸಡಗರ. ಬರಲಿರುವ ರಾಜ ಕುಮಾರರಿಗೆ ಸ್ವಾಗತ ಗೋಪುರಗಳು, ರಾಜ ಭವನಗಳು, ಪಾಕಶಾಲೆಗಳು, ವಿಹಾರಕ್ಕೆ ವಿಶೇಷ ಉದ್ಯಾನಗಳು ಹೀಗೆ ಅದ್ದೂರಿಯ ಸಿದ್ದತೆ ಆರಂಭಗೊಂಡಿತು.

ಏಕಚಕ್ರನಗರದಲ್ಲಿ ಬ್ರಾಹ್ಮಣನ ಮನೆಗೆ ಬಂದ ಬಂಧುವೊಬ್ಬರು ಮಾತನಾಡುತ್ತಾ, ಪಾಂಚಾಲ ದೇಶದ ದ್ರುಪದ ಮಹಾರಾಜನ ಪುತ್ರಿಯ ವಿವಾಹಕ್ಕೆ ಸ್ವಯಂವರ ಏರ್ಪಾಡಾಗಿದೆ ಎಂದು ಹೇಳಿದರು. ಅಲ್ಲಿನ ಸಿದ್ದತೆ, ವೈಭವದ ವರ್ಣನೆ ಮಾಡತೊಡಗಿದರು. ಈ ಸುದ್ದಿ ಅಲ್ಲಿಂದ ಪಾಂಡವರ ಮಾತೆ ಕುಂತಿಗೂ, ಧರ್ಮರಾಯನಿಗೂ ತಿಳಿಯಿತು. ನಾವಿನ್ನು ಈ ಊರು ತೊರೆದು ಪಾಂಚಾಲದತ್ತ ಹೋಗಬೇಕಾದ ಹೊತ್ತು ಬಂದಿದೆ ಎಂದು ಮಾತನಾಡಿಕೊಂಡರು. ಹಾಗೆಯೇ ಮನೆಯ ಆಶ್ರಯದಾತನಲ್ಲಿ ನಾವಿನ್ನು ಇಲ್ಲಿಂದ ಮುಂದೆ ಹೋಗಬೇಕಾಗಿದೆ. ಈ ವರೆಗೆ ನಮಗೆ ರಕ್ಷಣೆ ಆಶ್ರಯ ನೀಡಿದ ನಿಮಗೆ ಋಣಿಗಳಾಗಿದ್ದೇವೆ ಎಂದು ವಂದಿಸಿ ಹೊರಡಲು ಪಾಂಡವ ಮಾತೆ ಅನುಮತಿ ಕೇಳಿದಾಗ – ಆ ಬ್ರಾಹ್ಮಣ, ಪತ್ನಿ ಮಕ್ಕಳ ಕಣ್ಣಂಚುಗಳು ಒದ್ದೆಯಾದವು. “ನೀವು ನಮ್ಮ ಆಶ್ರಯದಲ್ಲಿ ಇದ್ದಿರಿ ಎಂಬ ಮಾತು ಬಹಳ ದೊಡ್ಡದಾಯಿತು! ನಾವೇ ನಿಮ್ಮ ಋಣದಲ್ಲಿದ್ದೇವೆ. ನೀವು ನಮಗೆ ಜೀವದಾತರು. ಎಂದೋ ರಕ್ಕಸನ ಹೊಟ್ಟೆಯೊಳಗೆ ಜೀರ್ಣವಾಗಬೇಕಾಗಿದ್ದ ನಾನಿಂದು ಬದುಕಿರುವುದು ನೀವಿತ್ತಿರುವ ಪ್ರಾಣಭಿಕ್ಷೆಯಿಂದ. ಇಲ್ಲಿಂದ ಹೋಗದೆ ನಮ್ಮೊಂದಿಗೆ ಎಷ್ಟು ಕಾಲಬೇಕಾದರೂ ಇರಬಹುದು” ಎಂದು ವಿನಂತಿ ಮಾಡತೊಡಗಿದರು. ಪಾಂಡವರಿಗೆ ಹೋಗುವ ಅಗತ್ಯವಿದೆ ಎಂದಾಗ, ಆತ್ಮೀಯ ಬಂಧುವನ್ನು ಬೀಳ್ಗೊಡುವಂತೆ ಕಡು ವೇದನೆ ದುಃಖ ಭಾವದಿಂದ ಅನಿವಾರ್ಯವಾಗಿ ಬೀಳ್ಕೊಟ್ಟರು.

ಪಾಂಡವರು ಮಾತೆ ಕುಂತಿಯ ಜೊತೆ ಪಾಂಚಾಲದತ್ತ ಹೊರಟರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page