ಭಾಗ -101
ಭರತೇಶ್ ಶೆಟ್ಟಿ ,ಎಕ್ಕಾರ್

ಕುಂತಿಯ ಮಾತು ಕೇಳಿ ಮನೆಯ ಯಜಮಾನ “ಅಯ್ಯೋ ನೀವು ನಿರಾಶ್ರಿತರಾಗಿ ಬಂದು ನಮ್ಮ ಆಶ್ರಯದಲ್ಲಿದ್ದೀರಿ. ಹಾಗೆಂದು ನಿಮ್ಮಲ್ಲೊಬ್ಬನನ್ನು ಬಲಿ ಕೇಳಲು ನಾನು ಸಿದ್ದನಿಲ್ಲ” ಎಂದನು. ಆಗ ಕುಂತಿ ಮನೆಯ ಯಜಮಾನನ್ನು ಕರೆದು ಗೌಪ್ಯವಾಗಿ “ಆಶ್ರಯದಾತನೇ, ನಾವು ಈ ಊರವರ ಋಣದಲ್ಲಿದ್ದೇವೆ. ನಿತ್ಯ ಭಿಕ್ಷಾನ್ನ ನೀಡಿ ಸಾಕುತ್ತಿದ್ದಾರೆ. ನನ್ನ ಮಗನಿಗೆ ದಿವ್ಯಶಕ್ತಿಯಿದೆ. ಇಂತಹ ರಕ್ಕಸರನ್ನು ಲೀಲಾಜಾಲವಾಗಿ ವಧಿಸಿ ಈ ಊರಿಗೆ ಬಂದಿರುವ ಮಾರಿಯನ್ನು ನಿವಾರಿಸಬಲ್ಲ ಶಕ್ತನಿದ್ದಾನೆ. ಹಾಗಾಗಿ ನೀವೇನೂ ಚಿಂತಿಸಬೇಡಿ. ನಿಮ್ಮ ಪ್ರಾಣಭಯಕ್ಕೆ ಅಭಯಪ್ರದವಾಗಿ ನನ್ನ ಮಗನ ದಿವ್ಯ ಶಕ್ತಿಯ ವಿಶೇಷದ ವಿಚಾರ ಹೇಳಿರುವೆ. ಯಾವುದೇ ಕಾರಣಕ್ಕೂ ಈ ಸತ್ಯ ಯಾರಿಗೂ ಗೊತ್ತಾಗಬಾರದು. ಒಂದೊಮ್ಮೆಗೆ ಈ ರಹಸ್ಯ ಬಯಲಾದರೆ ತೊಂದರೆಯಾಗುತ್ತದೆ. ನಿಮ್ಮ ಜೀವಕ್ಕೆ ಸಮನಾಗಿ ಈ ಗುಟ್ಟನ್ನು ಕಾಪಾಡಬೇಕು” ಎಂದು ಕುಂತಿ ನಿರ್ದೇಶಿಸಿದಳು. ಆಗ ಬ್ರಾಹ್ಮಣನೂ ನೆಮ್ಮದಿಯಿಂದ ಒಪ್ಪಿದನು.
ಕುಂತಿಯೂ ಭೀಮನೂ ಮನೆಗೆ ಮರಳಿದಾಗ ಧರ್ಮರಾಯ ಅರ್ಜುನ ನಕುಲ ಸಹದೇವರೂ ಭಿಕ್ಷಾನ್ನ ಪಡೆದು ಮರಳಿ ಬಂದಿದ್ದಾರೆ. ಬಕನ ವಧೆಗೆ ಭೀಮ ನಾಳೆ ತೆರಳುವ ವಿಷಯ, ಕಾರಣ ಕುಂತಿ ಉಳಿದವರಿಗೆ ತಿಳಿಸಿದಳು.
ಅಂದು ರಾತ್ರಿ ಯಜಮಾನನ ಮನೆಯಿಂದ ಬಗೆಯ ಬಗೆಯ ಭಕ್ಷ ಖಾದ್ಯಗಳ ಘಮಗಮಿಸುವ ಪರಿಮಳ ತೇಲಿ ಬರುತ್ತಿತ್ತು. ಬಕನ ಬಕ್ಷಣೆಗೆ ಸಿದ್ಧವಾಗುತ್ತಿತ್ತು. ಭೀಮನಿಗೆ ಕಾಯದ ಕಸುವು ನಿವಾರಿಸಿ ರಕ್ಕಸನೊಂದಿಗೆ ಕಾದಾಡಿ ವ್ಯಾಯಾಮ ಮಾಡಿಕೊಳ್ಳುವ ಉತ್ಸಾಹ. ಮತ್ತೊಂದೆಡೆ ಭಕ್ಷ ಭೋಜ್ಯಗಳ ತಿಂದು ಚಪ್ಪರಿಸುವ ಕಾತರವೂ ಉಮ್ಮಳಿಸಿ ಬರುತ್ತಿತ್ತು. ಹೇಗೋ ಬೆಳಗಾಯಿತು.. ಶುಚಿರ್ಭೂತನಾಗಿ ನೈಮಿತ್ತಿಕ ಕರ್ಮಗಳನ್ನು ಪೂರೈಸಿ ಜಟ್ಟಿ ಚಲ್ಲಣ ಬಿಗಿದು ಕಟ್ಟಿ, ಶುಭ್ರ ವಸ್ತ್ರ ಸುತ್ತಿಕೊಂಡು ಉತ್ತರೀಯವನ್ನು ಮೈಗೆ ಹೊದ್ದುಕೊಂಡು ತಯಾರಾದನು. ಅಮ್ಮ , ಅಣ್ಣನ ಪಾದ ಸ್ಪರ್ಶಿಸಿ ವಂದಿಸಿದನು. ತಮ್ಮಂದಿರಿಗೆ ಆಲಿಂಗನದ ಮೂಲಕ ತಾನು ಹೊರಟ ಕಾರ್ಯ ಜಯಪ್ರದವಾಗಿಸಲು ಹಾರೈಸಿಕೊಂಡನು. ಬಳಿಕ ಸಿದ್ದವಾಗಿದ್ದ ಬಂಡಿಯತ್ತ ಸಾಗಿದ ಭೀಮ. ಬಲಿಷ್ಟ ಜೋಡಿ ಕೋಣಗಳನ್ನು ಬಂಡಿಯೆಳೆಯಲು ಕಟ್ಟಲಾಗಿತ್ತು. ಎಲ್ಲರಿಗೂ ವಂದಿಸಿ ಬಕನಿರುವ ತಾಣದತ್ತ ಹೊರಟನು. ಕೋಣಗಳನ್ನು ಕಟ್ಟಿರುವ ಬಂಡಿಯೇರಿ ತದ್ರೂಪಿ ಯಮನಂತೆ ಗಮಿಸುತ್ತಿರಲು ಮೋಜಿಗಾಗಿಯೋ ತನ್ನ ಉಲ್ಲಾಸಕ್ಕಾಗಿಯೋ ಎಂಬಂತೆ ಹಾಡತೊಡಗಿದನು. ಸುಮಧುರವಾಗಿದ್ದ ಭೀಮ ಗಾಯನ ಬಕನ ಪಾಲಿಗೆ ಅಂತಿಮ ಚರಮ ಗೀತೆಯಾಗಿತ್ತು.
ವಿಶ್ವಾಸೋ ಫಲದಾಯಕ ಎಂಬಂತೆ ಬ್ರಾಹ್ಮಣ ಮತ್ತು ಮನೆಯವರು ಬಂಡಿ ತುಂಬಿಸಿದ್ದ ಆಹಾರ ಬಕನಿಗಾಗಿ ಸಿದ್ದ ಪಡಿಸಿದಂತಿರಲಿಲ್ಲ. ಭೀಮನಿಗಾಗಿಯೇ ಪ್ರೀತಿಯಿಂದ ಮಾಡಿದ ಭೋಜ್ಯ ಭಕ್ಷಗಳಾಗಿದ್ದವು. ಪರಿಮಳ ಆಘ್ರಾಣಿಸಿ ಪ್ರೇರಿತನಾಗಿ ತಿರುಗಿ ಕುಳಿತು ತಿನ್ನ ತೊಡಗಿದನು ಭೀಮ. ಬಕವನ ಅಂದರೆ ರಕ್ಕಸನಿರುವ ಕಾಡು ಸಮೀಪಿಸಿದಾಗ ಬಂಡಿಯಲ್ಲಿದ್ದ ಬಗೆ ಬಗೆಯ ಖಾದ್ಯ, ಭಕ್ಷ, ಭೋಜ್ಯ, ಪೇಯ, ಕ್ಷೀರ, ಉದಕ, ಮೃಷ್ಟಾನ್ನಗಳು ವೃಕೋದರನ ಉದರಾಂತರ್ಗತವಾಗಿದ್ದವು. ತನ್ನ ಉತ್ತರೀಯದಿಂದ ಕೈ ಒರೆಸುತ್ತಾ ಉಂಡದ್ದಕ್ಕೆ ಸಾಕ್ಷಿಯೋ ಎಂಬಂತೆ ತೃಪ್ತಿಯ ಸುದೀರ್ಘ ತೇಗು ನಾಭಿಯಿಂದ ಕಂಠ ಮುಖೇನ ಮೊಳಗಿತು.
ದೂರದಿಂದ ಬಂಡಿಗೆ ಕಟ್ಟಿದ ಘಂಟೆಯ ನಿನಾದ ಕೇಳಿ ಆಹಾರ ಭಕ್ಷನೆಗೆ ಎದ್ದು ಬಕ ಬರುತ್ತಿದ್ದಾನೆ. ಏನೂ ನೋಡುವುದು? ಬರಿದಾದ ಬಂಡಿಯಲ್ಲಿ ಒಬ್ಬಾತ ಬಂದಿದ್ದಾನೆ. ಕಲ್ಲದಾರಿಯ ಮೇಲೆ ಹೊರಳುತ್ತಾ ಬರುವ ಬಂಡಿಯ ಚಕ್ರ ಹೊಮ್ಮಿಸುತ್ತಿದ್ದ ಕರ ಕರ ಶಬ್ದದಂತೆ ಕೋಪದಿಂದ ಹಲ್ಲುಗಳನ್ನು ಘರ್ಷಿಸಿದ ಬಕಾಸುರ. ಹಸಿವೂ ಕ್ರೋಧವೂ ಸೇರಿ ಸಮ್ಮಿಳಿತ ಕೋಪದಿಂದ ಓಡಿಬಂದು ಚಲಿಸುತ್ತಿದ್ದ ಬಂಡಿಯಲ್ಲಿ ಕುಳಿತಿದ್ದ ಭೀಮನ ಬೆನ್ನಿಗೆ ದಡಾರನೆ ಗುದ್ದಿದನು. ಮುಂದಕ್ಕೆ ಮಗುಚಿ ಬಿದ್ದ ಭೀಮ, ಸಾವರಿಸಿಕೊಳ್ಳುವ ಮೊದಲೇ ರಟ್ಟೆಯೆಳೆದು ನೆಲಕ್ಕಪ್ಪಳಿಸಲು ಬಕ ಸೆಳೆದರೆ, ಆತನನ್ನೇ ಆಧರಿಸಿ ನೆಗೆದು ಮುಷ್ಟಿಗಟ್ಟಿ ಬಲವಾದ ಪ್ರಹಾರ ಬಕನ ತಲೆಗೆ ಅಪ್ಪಳಿಸಿದ ಭೀಮ. ಪರಿಣಾಮ ದೂಡಲ್ಪಟ್ಟಂತೆ ಓಲಾಡುತ್ತಾ ಮೂರ್ನಾಲ್ಕು ಹೆಜ್ಜೆ ಕ್ರಮಿಸಿ ಕವುಚಿ ಬಿದ್ದನು ಬಕಾಸುರ. ಮಾತಿಗೆಲ್ಲಿದೆ ಅವಕಾಶ? ಹೊರಳಿ ಎದ್ದು ಹೊಡೆಯಲು ಏಳ ಬೇಕೆನ್ನುವಷ್ಟರಲ್ಲಿ ಮಾರುತಿ ಹಾರಿ ಬಂದು ಮೊಣಗಂಟಿನಿಂದ ಬಕನ ಎದೆಗೆ ಗುದ್ದಿ, ಮುಷ್ಟಿಯೇಟು ಮುಸುಡಿಗೆ ಹೊಡೆದಾಗಿತ್ತು. ರಕ್ಕಸನಿಗೆ ಏಕಕಾಲದ ಎರಡು ಘಾತ ಸೈರಿಸಿಕೊಳ್ಳಲಾಗದೆ ಕೈಕಾಲು ಕೊಡವುತ್ತಾ ವಿಲವಿಲನೆ ಒದ್ದಾಡುತ್ತಿದ್ದಾನೆ. ಆಗ ಭೀಮ ರಕ್ಕಸನನ್ನು ಮೂದಲಿಸುವಂತೆ ಸ್ವಲ್ಪ ವಿಶ್ರಾಂತಿ ಪಡೆದು ವ್ಯಾಯಾಮ ಮಾಡಿದನು. ಹೇಗೋ ಹೆಣಗಾಡಿ ಎದ್ದು ನಿಂತು ಶರೀರ ಬಲ ಕ್ರೋಢೀಕರಿಸಿ ಭೀಮನತ್ತ ಓಡಿ ಬಂದು ಹಿಡಿದು ಎತ್ತಿ ಬಿಸಾಡಲು ಪ್ರಯತ್ನಿಸಿದರೆ, ಬಂದವವನ ವೇಗವನ್ನೇ ಅನುಸರಿಸಿ ಭುಜವಿಡಿದು ಎಳೆದು ಓಡಿ ಬರುತ್ತಿದ್ದ ದಿಕ್ಕಿನತ್ತಲೇ ಸೆಳೆದು ಎತ್ತಿ ಬಿಸಾಡಿದ ಭೀಮಸೇನ. ಕುಂಕುಮಾಭಿಷೇಕಗೊಂಡಂತೆ ಮೈಯೆಲ್ಲಾ ರಕ್ತ ಸುರಿಸಿಕೊಂಡು ಅರ್ಧ ಪ್ರಾಣ – ಅಲ್ಪ ತ್ರಾಣ ಇರುವ ಸ್ಥಿತಿಯಲ್ಲೂ ಸೋಲೊಪ್ಪದ ಬಕಾಸುರ ಅಂತಿಮ ಹೋರಾಟವೋ ಎಂಬಂತೆ ಮೊಣಕಾಲಿಗೆ ಕೈಯೂರಿ ಎದ್ದು ಭೀಮನತ್ತ ಆವೇಗ ಆವೇಶ ಹೊತ್ತು ವೇಗ ಹೊಂದಿಸಲಾಗದೆ ವಾಲುತ್ತಾ ಬಂದನು. ಆಗ ಕಾದು ಕುಳಿತು ಮುಷ್ಟಿಗಟ್ಟಿ ನಿಂತಿದ್ದ ಭೀಮನ ಘಾತ ಬಕನ ನೆತ್ತಿಗೂ ಎದೆಗೂ ಅತಿ ವೇಗವೂ, ಮಹಾಬಲಯುತವಾಗಿಯೂ ಹೊಡೆಯಲ್ಪಟ್ಟಾಗ ಮುಷ್ಟಿಯೇ ಗದೆಯಂತೆ ಆಯುಧವಾಗಿ ಪರಿಣಮಿಸಿತು. ರಕ್ಕಸ ರುಧಿರದೋಕುಳಿಯನ್ನು ಬಾಯಿ, ಮೂಗು, ಕಿವಿಯಲ್ಲೆಲ್ಲಾ ಚಿಮ್ಮಿಸುತ್ತಾ ಧರಾಶಾಯಿಯಾದನು. ವಾತಾತ್ಮಜನ ಈ ಘಾತ ರಕ್ಕಸನ ಶರೀರವನ್ನು ನಿರ್ವಾತಗೊಳಿಸಿತ್ತು. ಘರ್ಜಿಸಲೂ ದಮ್ಮಿಲ್ಲದೆ ನರಳುತ್ತಾ ಬಕಾಸುರ ಹತಪ್ರಾಣನಾದ.
ಅತ್ತಿತ್ತ ನೋಡಿದರೆ ಸನಿಹದಲ್ಲೇ ಒಂದು ಸರೋವರವಿತ್ತು, ಅದಕ್ಕಿಳಿದು ಈಜಿ ತನ್ನ ಮೈ ಬೆವರು ವಸ್ತ್ರಗಳನ್ನು ತೊಳೆದು ಶುಚಿಯಾದನು. ಮಗನ ಕಂಡು ಹೊಗಳಲು ಅಪ್ಪನೇ ಬಂದನೋ ಎಂಬಂತೆ ಹಿತವಾಗಿ ಬೀಸುತ್ತಿದ್ದ ಮಂದ ಮಾರುತ. ಹೊಟ್ಟೆ ಬಿರಿಯುವಷ್ಟು ತಿಂದ ಕಾರಣವೋ ಎಂಬಂತೆ ಜಡವೂ, ಆಲಸ್ಯವೂ ಶರೀರಕ್ಕೆ ಆವರಿಸಿದ್ದರಿಂದ ಅಲ್ಲೇ ವಿಶಾಲ ವೃಕ್ಷದಡಿ ವಿರಮಿಸಿ ತುಸು ಹೊತ್ತು ಮಲಗಿದನು ಭೀಮ. ಎಚ್ಚೆತ್ತಾಗ ಮುಸ್ಸಂಜೆಯಾಗಿದೆ, ನಸು ಬೆಳಕಲ್ಲಿ ಸತ್ತು ಬಿದ್ದ ರಕ್ಕಸನ ಹೆಣವನ್ನು ಎತ್ತಿ ಬಂಡಿಗೆ ತುಂಬಿಸಿದ. ಏಕಚಕ್ರ ನಗರದತ್ತ ಬಂದು ಮುಟ್ಟುವಾಗ ಕತ್ತಲೆ ಆವರಿಸಿದ್ದು ಹೊತ್ತು ತಡರಾತ್ರಿಯಾಗಿದೆ. ನೀರವ ಪ್ರಶಾಂತ ರಾತ್ರಿ. ರಾಕ್ಷಸನ ಭಯದಿಂದ ಜನ ಸಂಚಾರವೇ ಈ ಗ್ರಾಮದಲ್ಲಿಲ್ಲ. ಊರ ದ್ವಾರದ ಬಳಿ ಬಂಡಿ ನಿಲ್ಲಿಸಿ ಬಕಾಸುರನ ಮಣ ಭಾರದ ಹೆಣವನ್ನು ಊರ ದ್ವಾರಕ್ಕೆ ಒರಗಿ ನಿಲ್ಲಿಸಿ ಬಿಗಿದು ಕಟ್ಟಿ ಬಿಟ್ಟನು.
ಬಳಿಕ ಬಂಡಿಯನ್ನೇರಿ ಭೀಮಸೇನ ಮನೆ ತಲುಪಿದನು. ಎಲ್ಲರೂ ಕಾತರದಿಂದ ಭೀಮನಿಗಾಗಿ ಕಾಯುತ್ತಿದ್ದಾರೆ. ಬಂದವನನ್ನಯ ಕಂಡೊಡನೆ ಸಂಭ್ರಮವೇ ಸಂಭ್ರಮ. ಮನೆಯ ಯಜಮಾನ ಬ್ರಾಹ್ಮಣನಂತೂ ಪ್ರಾಣದಾನ ನೀಡಿದ ಭೀಮನನ್ನು ಕಂಡು ಭಕ್ತಿಪರವಶನಾಗಿ ಸಾಕ್ಷಾತ್ ದೇವರೇ ಬಂದಿರುವುದು ಎಂದು ಕೈ ಮುಗಿದು ದರ್ಶನ ಪಡೆವಂತೆ ವರ್ತಿಸುತ್ತಿದ್ದಾನೆ.
ಮುಂದುವರಿಯುವುದು…