ಭಾಗ – 100
ಭರತೇಶ್ ಶೆಟ್ಟಿ, ಎಕ್ಕಾರ್

ಏಕಚಕ್ರ ನಗರದಲ್ಲಿ ಬಹುಮಂದಿ ವಿದ್ಯಾವಂತರೂ, ಶ್ರದ್ದಾವಂತರೂ, ಸತ್ಕರ್ಮ ನಿರತರೂ, ಧರ್ಮಜ್ಞರೂ ನೆಲೆಸಿದ್ದರು. ಇಂತಹ ಏಕಚಕ್ರ ನಗರಕ್ಕೆ ಕುಂತಿಯೂ ಪಾಂಡವರೂ ವಿಪ್ರ ವೇಷದಿಂದಲೇ ಪ್ರವೇಶಿಸಿದರು. ನಗರ ಪೂರ್ತಿ ಸುತ್ತಾಡಿ ನಗರದ ಮೂಲೆಯಲ್ಲಿದ್ದ ಓರ್ವ ಬ್ರಾಹ್ಮಣನ ಮನೆಯಲ್ಲಿ ಆಶ್ರಯ ಪಡೆದರು. ಬದುಕಿದ್ದಾರೆ ಪಾಂಡವರು ಎಂಬ ಗುಟ್ಟು ರಟ್ಟಾಗದ ರೀತಿ ತಲೆಮರೆಸಿಕೊಂಡು ಬದುಕಲು ಈ ವ್ಯವಸ್ಥೆ ಅನುಕೂಲವೂ ಆಗಿತ್ತು.
ಚಕ್ರವರ್ತಿ ಪಾಂಡುಮಹಾರಾಜನ ಮಕ್ಕಳಾದ ಪಾಂಡವರಿಗೆ ಮಾಡಲು ತತ್‍ಕ್ಷಣ ಕ್ಕೆ ಕಸುಬು ಇರದೆ ಭಿಕ್ಷಾವೃತ್ತಿಯನ್ನೇ ಆಧರಿಸಿ ಹೊರಟರು. ಇದು ಸಾಮ್ರಾಜ್ಞಿಯಾದ ಕುಂತಿಯ ಮನಸ್ಸಿಗೆ ಅಸಹನೀಯ ವೇದನೆ ಉಂಟು ಮಾಡಿತು. ಪ್ರಜಾಪರಿವಾರದ ಬೇಕು ಬೇಡಗಳಿಗೆ ಆಧಾರವಾಗಬೇಕಾದ ನನ್ನ ಮಕ್ಕಳು ಬೇಡುವುದಕ್ಕೆ ಹೊರಟಾಗ ಬೇಡ ಹೋಗ ಬೇಡಿ ಎಂದರೆ ಜೀವನೋಪಾಯಕ್ಕೆ ಬೇರೆ ಗತಿಯಿಲ್ಲ. ಬೇಡಿ ತಂದ ಭಿಕ್ಷಾನ್ನ ಹಂಚಿ ತಿನ್ನುವ ಹೊತ್ತಿಗೆ ಚಕ್ರವರ್ತಿಯಾಗಿ ಆಳಬೇಕಾದ ಯೋಗ್ಯ ಮಹಾರಾಜ ಧರ್ಮರಾಯನಿಗೆ ಸಾಮಾನ್ಯ ಜನಜೀವನ ಏನು ಎಷ್ಟು ಎಂಬ ಆಳ ಅಂತರ್ಯದ ಪಾಠ, ಸಾಮ್ರಾಜ್ಯದ ಪೀಠ ಏರುವ ಮೊದಲೇ ಅನುಭವವಾಯಿತು. ಬೇಡಿ ತಂದ ಭಿಕ್ಷಾನ್ನದಲ್ಲಿ ಒಂದು ಪಾಲು ಗೋವುಗಳಿಗೆ ತಿನ್ನಿಸಿ ತಾವೂ ಉಣ್ಣುತ್ತಿದ್ದರು.
ಏಕಚಕ್ರ ನಗರದಲ್ಲಿ ಸುಂದರವಾದ ಶಿವದೇಗುಲವಿತ್ತು. ಪಾಂಡವರಿಗೆ ನಿತ್ಯ ಮಹಾದೇವ ಶಿವ ಸಾನಿಧ್ಯದಲ್ಲಿ ಪ್ರಾರ್ಥಿಸುವ, ವಿದ್ವಾಂಸರಿಂದ ಪ್ರವಹಿಸಲ್ಪಡುತ್ತಿದ್ದ ಶಿವಪುರಾಣ, ಪಂಚಾಕ್ಷರಿ ಮಹಾತ್ಮೆ, ಧರ್ಮಬೋಧನೆ, ಸದುಪದೇಶಗಳನ್ನು ನಿತ್ಯ ಮನನ ಮಾಡುವ ಮಹಾಭಾಗ್ಯ ಪರಶಿವನೇ ಕರುಣಿಸಿದಂತಿತ್ತು.
ಹೀಗೆ ಐದೂ ಜನ ಪಾಂಡವರು ಬೇಡುವಲ್ಲೂ ನಿಯಮವಿಟ್ಟುಕೊಂಡಿದ್ದರು. ಪ್ರತಿಯೊಬ್ಬರೂ ಒಬ್ಬರ ಮನೆಯಲ್ಲಷ್ಟೇ ಭಿಕ್ಷಾನ್ನ ಸ್ವೀಕರಿಸಿ ಮರಳಿ ಬರುತ್ತಿದ್ದರು. ಈ ದಿನ ಭೀಮನಿಗೆ ಮೊದಲ ಮನೆಯಲ್ಲೇ ಭಿಕ್ಷೆ ದೊರೆತ ಕಾರಣ ಕೂಡಲೇ ಹಿಂದಿರುಗಿ ಬಂದಿದ್ದನು. ಕುಂತಿಯ ಜೊತೆ ಮನೆಯಲ್ಲಿರಬೇಕಾದರೆ ಅವರಿದ್ದ ಮನೆಯ ಒಡೆಯ ಹಾಗೂ ಮನೆಯವರು ಅಳುತ್ತಿರುವ ಧ್ವನಿ ಕೇಳಿಸಿತು. ಏನೋ ಸಂಕಟವಿದೆಯೆಂದು ಅರಿತ ಕುಂತಿ ಭೀಮನನ್ನು ಕರೆದು ನೋಡಿ ಬರುವಂತೆ ಕರೆದು ಅತ್ತ ಹೊರಟಳು. ಮನೆಯೊಡೆಯ ಬ್ರಾಹ್ಮಣ, ಆತನ ಮಡದಿ, ಮಗಳು ಮತ್ತು ಬಾಲಕ ಮಗ ಮರುಗಿ ಮನ ಮಿಡಿದು ಅಳುತ್ತಿದ್ದಾರೆ. ಏನೇನೋ ಹೇಳುತ್ತಿದ್ದಾರೆ. ಗೊಂದಲ – ಒಂದೂ ಅರ್ಥವಾಗುತ್ತಿಲ್ಲ. ಅಳುತ್ತಾ ಜೀವನದ ಜಿಗುಪ್ಸೆ, ಶೋಕ ಸಂಗತಿ, ಇನ್ನು ಬದುಕಿ ಫಲವೇನು? ಯಾಕೆ ಬದುಕಬೇಕು ಹೀಗೆ ರೋದಿಸುತ್ತಿದ್ದಾರೆ. “ಇಲ್ಲಿರುವುದು ಬೇಡ ಎಂದು ಮೊದಲೇ ಹೇಳಿದ್ದೆ. ಬಂಧು ಬಾಂಧವರಿದ್ದಾರೆ, ಇಲ್ಲೇ ಇರೋಣ ಎಂದು ಹೇಳಿ ಉಳಿಯುವಂತೆ ಮಾಡಿದೆ” ಎಂದು ಪತಿ ತನ್ನ ಪತ್ನಿಯ ಮೇಲೆ ಆರೋಪಿಸುತ್ತಿದ್ದಾನೆ. “ಇರಲಿ ನನ್ನ ಜೀವನದಲ್ಲಿ ಆಗಬೇಕಾದದ್ದೆಲ್ಲಾ ಆಗಿದೆ. ನೀನು ನನ್ನ ಸಹಧರ್ಮಿಣಿ, ಮಕ್ಕಳನ್ನು ಚೆನ್ನಾಗಿ ಬೆಳೆಸು. ನಾನೇ ರಕ್ಕಸನ ಬಾಯಿಗೆ ತುತ್ತಾಗಿ ಹೋಗುತ್ತೇನೆ. ಇನ್ನು ಬದುಕಿದರೂ ಹೆಚ್ಚು ಕಾಲವೇನೂ ನನ್ನ ಪಾಲಿಗೆ ಉಳಿದಿಲ್ಲ. ಮಕ್ಕಳು ಹಾಗಲ್ಲ ಬೆಳೆಯಬೇಕಾದವರು. ನೀನು ಜವಾಬ್ದಾರಳಾಗಿ ಅವರನ್ನು ಸಾಕು. ನನಗೆ ಈ ಬದುಕು ಇನ್ನು ಸಾಕು. ಒಂದಲ್ಲ ಒಂದು ದಿನ ಈ ಬಾಳ್ವೆ ಮುಗಿಸಲೇಬೇಕಲ್ಲಾ” ಹೀಗೆ ಏನೇನೋ ರೋದನೆ, ದುಃಖದ ಮಾತುಗಳು ಆತನದ್ದಾಗಿತ್ತು. ಕುಂತಿಗೆ ಏನೊಂದೂ ಅರ್ಥವಾಗದೆ ಭೀಮನ ಮುಖ ನೋಡಿದರೆ- ಆತನಿಗೂ ಅರ್ಥವಾಗದಂತಿದೆ.
ಆಗ ಆ ಮನೆಯ ಯಜಮಾನನ ಪತ್ನಿ, “ಸ್ವಾಮಿ ಹೆಣ್ಣಿಗೆ ಸುಮಂಗಲೆಯಾಗಿ ಮರಣ ಪ್ರಾಪ್ತವಾದರೆ ಅದೇ ಪರಮ ಸೌಭಾಗ್ಯ. ಹಾಗಾಗಿ ನಾನೇ ಹೋಗುತ್ತೇನೆ. ಮಕ್ಕಳನ್ನು ನೀವಾದರೆ ದುಡಿದು ವಿದ್ಯಾಭ್ಯಾಸ, ರಕ್ಷಣೆ ನೀಡಿ ಬೆಳೆಸಬಲ್ಲಿರಿ. ಹೆಣ್ಣಾದ ನಾನು ಆ ಜವಾಬ್ದಾರಿಗೆ ಶಕ್ತಳಲ್ಲ.” ಇದು ಅವಳ ವಾದ. ಮಗಳು ಅವರನ್ನು ತಡೆದು ಹಠ ಮಾಡುತ್ತಾ, “ಹೆತ್ತವರ ಕಷ್ಟದಲ್ಲಿ ಮಕ್ಕಳು ಸಹಾಯಕರಾಗಬೇಕು. ನೀವ್ಯಾರಾದರೂ ಬಲಿಯಾದರೆ ನಾವು ಅನಾಥರೇ ಆಗುತ್ತೇವೆ. ನೀವಿಲ್ಲದೆ ನಮಗೆ ಬದುಕಲಾಗದು. ಮಾತ್ರವಲ್ಲ ಈಗ ಮಾತಾ ಪಿತೃ ಋಣ ಸಂದಾಯಕ್ಕೆ ಭಾಗ್ಯ ನನ್ನ ಪಾಲಿಗೆ ಒದಗಿ ಬಂದಿದೆ. ನಾನಲ್ಲದಿದ್ದರೂ ನಿಮ್ಮ ಬಾಳಿಗೆ ನನ್ನ ತಮ್ಮ ಮಗನಾಗಿ ಇರುತ್ತಾನೆ. ಆತನನ್ನು ಮಗನೂ – ಮಗಳೂ ಎರಡೂ ಆಗಿ ಸಾಕಿ ಸಲಹಿ ಬೆಳೆಸಿ. ನನಗೆ ಅನುಮತಿ ನೀಡಿ ಅವಕಾಶ ಕರುಣಿಸಿ” ಎಂದು ಸಂಸ್ಕಾರಯುತವಾಗಿ ಕೇಳಿದಳು.
ಇಷ್ಟೆಲ್ಲಾ ದುಃಖ ರೋದನೆಯ ಮಧ್ಯೆ ಆ ದಂಪತಿಗಳ ಮಗ ಬಾಲಕ ಪ್ರಾಯದವ ಬಾಲಿಶವಾಗಿ ಒಂದು ದೊಣ್ಣೆಯನ್ನು ಎತ್ತಿ ಹಿಡಿದು, “ಅಪ್ಪಾ ನನ್ನನ್ನು ಕಳುಹಿಸಿ. ನಮ್ಮನ್ನು ತಿಂದು ಹೊಟ್ಟೆ ತುಂಬಿಸುವ ಆ ರಕ್ಕಸನ ತಲೆಗೆ ಬಡಿದು ಅವನನ್ನೇ ಮುಗಿಸಿ ಇನ್ನು ಮುಂದೆ ಸಮಸ್ಯೆಯೇ ಇಲ್ಲದಂತೆ ಮಾಡುತ್ತೇನೆ” ಎಂದನು. ಆತನ ಬಾಲಿಶ ವೀರಾವೇಶಕ್ಕೆ ಹೆತ್ತವರಿಗೆ ದುಃಖದಲ್ಲೂ ನಗು ಬಂತು.
ಇಷ್ಟು ಹೊತ್ತು ಮರೆಯಲ್ಲಿ ನಿಂತು ಇವರ ದುಃಖ ದುಮ್ಮಾನ ಆಲಿಸಿದ ಕುಂತಿ ಮತ್ತು ಭೀಮನಿಗೆ ಹಿರಿಯರ ಮಾತು ಅರ್ಥವಾಗದಿದ್ದರೂ, ಮಗು ಬಾಲಕ ಹೇಳಿದ ಮಾತಿನಿಂದ ಏನೋ ವಿಷಯ ಸೂಕ್ಷ್ಮದ ಅರ್ಥವೂ – ಅದಕ್ಕೆ ಉಪಾಯವೂ ಪ್ರಾಪ್ತವಾಯಿತು. ಕುಂತಿ ಮತ್ತು ಭೀಮ ಮುಂದೊತ್ತಿ ಬಂದು, “ಏನಾಯಿತು ಸ್ವಾಮೀ? ಯಾಕೀ ಸಂಕಟ? ಯಾರಿಂದ ಈ ಕಷ್ಟ” ಎಂದು ವಿನಂತಿ ಸ್ವರದಲ್ಲಿ ಕೇಳಿದರು. ಮಾತ್ರವಲ್ಲದೆ “ಸಾಧ್ಯವಾಗುವ ಕೆಲಸವಾದರೆ ನನ್ನ ಮಕ್ಕಳಲ್ಲಿ ಹೇಳಿ ಪರಿಹರಿಸುವ ಅಥವಾ ಸಹಾಯ ಮಾಡುವ ಪ್ರಯತ್ನ ಮಾಡುವೆ” ಎಂದು ಬೇಡಿದಳು.
ಆಗ ಮನೆಯ ಯಜಮಾನ : “ತಾಯೇ ಈ ದುಃಖಕ್ಕೆ ಪರಿಹಾರವಿಲ್ಲ. ನಮ್ಮಲೊಬ್ಬರು ಸಾಯುವುದೇ ಅದಕ್ಕಿರುವ ಉತ್ತರ. ಹಾಗಾಗಿ ಯಾರು ಸಾಯುವುದೆಂಬ ತೀರ್ಮಾನಕ್ಕಾಗಿ ಈ ಸಂವಾದ. ಸಾಯುವ ಭಯ ನನಗಿಲ್ಲ. ಮುಂದೆ ಸಂಸಾರಕ್ಕೆ ಗತಿಯೇನು ಎಂಬ ವ್ಯಥೆ ಮಾತ್ರ” ಎಂದನು. ಕುಂತಿಗೆ ಒಗಟಿನಂತಹ ಮಾತು ಅರ್ಥವಾಗಲಿಲ್ಲ. “ಸಾಯುವುದೇ? ಯಾಕೆ? ಏನಾಗಿದೆ? ಸಾಯುವುದು ಯಾವ ಪಾಪಕ್ಕೆ ಪರಿಮಾರ್ಜನೆ?” ಎಂದು ಪ್ರಶ್ನಿಸಿದಳು. ಆಗ ಮನೆಯ ಯಜಮಾನ ಬ್ರಾಹ್ಮಣ ವಿವರಿಸ ತೊಡಗಿದರು “ತಾಯೇ ನಿಮ್ಮನ್ನು ನೋಡಿದರೆ ತೇಜಸ್ವಿ ತಪಸ್ವಿನಿಯಂತೆ ಕಾಣುತ್ತೀರಿ. ಹಾಗಾಗಿ ಅಂದು ಆಶ್ರಯ ಕೇಳಿದಾಗ ಇಲ್ಲ ಎನ್ನಲಾಗದೆ ಒಪ್ಪಿದ್ದೆನು. ನೀವು ಕೇಳುವಾಗ ಹೇಳದಿರಲು ಗುಟ್ಟಿನ ವಿಷಯವಲ್ಲವಿದು. ಪ್ರಜಾವರ್ಗದ ರಕ್ಷಣೆ ರಾಜನಾದವನ ಕರ್ತವ್ಯ. ಆದರೆ ಈ ಊರಿನ ರಾಜ ಹೇಡಿಯಂತೆ ವರ್ತಿಸುತ್ತಿದ್ದಾನೆ. ಯುದ್ದ ಮಾಡಿಯೂ ಇಲ್ಲ, ಹಾಗೆಂದು ಯಾರೂ ಈ ರಾಜ್ಯದ ಮೇಲೆ ಆಕ್ರಮಣವನ್ನೂ ಮಾಡಿಲ್ಲ. ಕಾರಣ ಈ ರಾಜ್ಯದಲ್ಲಿ ಬಡತನವಿದೆಯೇ ಹೊರತು ಸಮೃದ್ಧಿಯಿಲ್ಲ. ಹೇಗೋ ಕಷ್ಟದ ಜೀವನ ಸಾಗಿಸುತ್ತಿದ್ದೆವು. ಆದರೆ ಇತ್ತೀಚೆಗೆ “ಬಕ”ನೆಂಬ ರಕ್ಕಸ ನಮ್ಮೂರಿನ ಮೇಲೆ, ನಮ್ಮವರ ಮೇಲೆ ಆಕ್ರಮಿಸಿ ಕೈಗೆ ಸಿಕ್ಕ ದನ ಕರು, ಎಳೆ ಮಕ್ಕಳು, ಮನುಷ್ಯರು ಹೀಗೆ ಸಿಕ್ಕಿದ್ದನ್ನು ಮುಕ್ಕುತ್ತಾ ಉಪಟಳ ನೀಡ ತೊಡಗಿದ್ದ. ರಾಜನಾದವ ಹೇಡಿಯಂತೆ ರಕ್ಕಸನ ಉಸಾಬರಿ ಬೇಡವೆಂದು ಸುಮ್ಮನಿದ್ದಾನೆ. ತನ್ನ – ಹಾಗೂ ಪರಿವಾರದ ರಕ್ಷಣೆಯ ವ್ಯವಸ್ಥೆಯನ್ನಷ್ಟೇ ಮಾಡಿ ಕುಳಿತಿದ್ದಾನೆ. ಕೊನೆಗೆ ನಮ್ಮಲ್ಲೇ ಕೆಲವರು ಧೈರ್ಯ ತಳೆದು ರಕ್ಕಸನ ಜೊತೆ ಸಂಧಾನ ಮಾಡಿ, ದಿನಕ್ಕೊಂದು ಮನೆಯಿಂದ ಬಂಡಿ ಪೂರ್ತಿ ಅನ್ನ, ಖಾದ್ಯ, ಅಡುಗೆಗಳನ್ನು ತುಂಬಿ ಅದನ್ನು ಎರಡು ದನವೋ, ಎತ್ತೋ ಇಲ್ಲ ಕೋಣವನ್ನೋ ಬಂಡಿಗೆ ಕಟ್ಟಿಕೊಂಡು ಒಬ್ಬ ಮನುಷ್ಯನೂ ಅದರಲ್ಲಿ ಕುಳಿತು ರಕ್ಕಸನಲ್ಲಿಗೆ ಹೋಗಬೇಕು. ಬಂಡಿ ಆಹಾರ, ಕಟ್ಟಲ್ಪಟ್ಟ ಪ್ರಾಣಿ, ಹೋದ ಮನುಷ್ಯ ಒಬ್ಬರನ್ನೂ ಬಿಡದೆ ನುಂಗಿ ನೀರು ಕುಡಿಯುತ್ತಾನೆ ಆ ಬಲಾಢ್ಯ ರಕ್ಕಸ. ಆತ ರಕ್ಕಸನಾದರೂ ನಿಯತ್ತಿನಿಂದ ಈ ಒಪ್ಪಂದಕ್ಕೆ ಒಪ್ಪಿ ಉಪಟಳ ನೀಡದೆ ಉಳಿದಿರುವುದೇ ನಮಗೆ ಸದ್ಯದ ನೆಮ್ಮದಿ. ನಾಳೆ ನಮ್ಮ ಮನೆಯ ಸರದಿ. ನಾನು ಹೋಗುತ್ತೇನೆ ಎಂದರೆ ನನ್ನ ಮಡದಿ ಮಕ್ಕಳು ತಾವು ಹೋಗುತ್ತೇವೆಂದು ಹಠದ ವಾದ ಮಾಡುತ್ತಿದ್ದಾರೆ. ನಾನು ಸತ್ತರೆ ಜೀವನೋಪಾಯಕ್ಕೆ ಗತಿಯಿಲ್ಲ. ಅದಲ್ಲವಾದರೂ ಕೆಲಸಮಯ ಕಳೆದು ಮತ್ತೆ ಸರದಿಯಂತೆ ಒಬ್ಬೊಬ್ಬರೇ ಹೋಗಬೇಕು. ಆ ಕಂತು ಕಂತಿನಲ್ಲಿ ಬರುವ ದುಃಖದ ಬದಲು ಒಮ್ಮೆಲೇ ನಾವೆಲ್ಲರೂ ರಕ್ಕಸನಿಗೆ ಆಹಾರವಾಗಿ ಹೋಗುವುದೆಂದು ತೀರ್ಮಾನಿಸಿದ್ದೇವೆ. ಉಳಿದರಲ್ಲವೇ ಕಷ್ಟ ಸಹಿಸುವ ವೇದನೆ? ಸಾಯುವ ಭಯ ನಮಗ್ಯಾರಿಗೂ ಇಲ್ಲ. ಅದೇ ಕ್ಷೇಮವೆಂದು ಹಾಗೇ ನಡೆಯಲು ಒಪ್ಪಿದ್ದೇವೆ” ಎಂದು ಎಲ್ಲವನ್ನೂ ವಿವರಿಸಿ ಹೇಳಿದನು.
ಆಲಿಸಿದ ಕುಂತಿ “ಅಯ್ಯೋ ರಕ್ಕಸನ ಉಪಟಳವೇ? ನೀವು ನಮಗೆ ಆಶ್ರಯದಾತರು. ಪರ್ಯಾಯವಾಗಿ ಪಿತ ಸಮಾನರಾಗಿದ್ದೀರಿ. ನಿಮ್ಮ ಕಷ್ಟದಲ್ಲಿ ನಮಗೂ ಪಾಲು ಇದೆ. ಹಾಗಾಗಿ ನಾಳೆಯ ದಿನ ಬಂಡಿ ಅನ್ನ ಹಾಗೂ ಬಾಕಿ ಎಲ್ಲಾ ವ್ಯವಸ್ಥೆ ಮಾಡಿ ಸಿದ್ಧಗೊಳಿಸಿ. ಹೋಗುವ ಮನುಷ್ಯನ ವ್ಯವಸ್ಥೆ ನಾನು ಮಾಡುತ್ತೇನೆ” ಎಂದು ಸಾಮ್ರಾಟನ ಪತ್ನಿಯಾಗಿ, ಪ್ರಜಾಪಾಲಕಿ ಗುಣವನ್ನೂ ಪ್ರಕಟಿಸುತ್ತಾ ಪ್ರಜೆಗಳ ಸಂಕಷ್ಟ ಪರಿಹಾದ ಹೊಣೆಗಾರಿಕೆಗೆ ಹೆಗಲು ಕೊಟ್ಟು ಧೈರ್ಯದ ಮಾತು ಹೇಳಿದಳು.
ಮುಂದುವರಿಯುವುದು…