
ಚಾಮರಾಜನಗರ: ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ್ದು ಈ ವೇಳೆ ಇನ್ನು ಮುಂದೆ ಮಲೆ ಮಹದೇಶ್ವರ ಬೆಟ್ಟ ಪಾನಮುಕ್ತ ಪ್ರದೇಶ ಎಂದು ಘೋಷಣೆ ಮಾಡಿದ್ದಾರೆ.
ಕಳೆದ ಒಂದುವರೆ ವರ್ಷದಿಂದ ಹಿಂದಿನ ಪ್ರಾಧಿಕಾರದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಜಾರಿಯಾಗದಿರುವ ಕುರಿತು ಪ್ರಾಧಿಕಾರದ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಗಳು ಪ್ರಾಧಿಕಾರದ ಕೆಲಸ ಕಾರ್ಯಗಳು, ಕಾಮಗಾರಿಗಳು ಸೂಕ್ತವಾಗಿ ಹಾಗೂ ಶೀಘ್ರವಾಗಿ ನಡೆಯಲು ಒಬ್ಬ ಎಇಇಎಯನ್ನು ನೇಮಕ ಮಾಡುವಂತೆ ಸೂಚನೆ ನೀಡಿದರು.
ಮಾತ್ರವಲ್ಲದೆ ಮಲೆ ಮಹದೇಶ್ವರ ಬೆಟ್ಟದ ಪ್ರಸಾದದ ಲಡ್ಡಿಗೆ ತಿರುಪತಿ ದೇವಸ್ಥಾನದ ಮಾದರಿಯಲ್ಲಿ ನಂದಿನಿ ತುಪ್ಪ ಬಳಸಿ ಪ್ರಸಾದ ಗುಣಮಟ್ಟ ಹೆಚ್ಚಿಸುವ ಕುರಿತು ಚರ್ಚಿಸಲಾಯಿತು. ಬೆಟ್ಟಕ್ಕೆ ಸೇರಿದ ಜಾಗದಲ್ಲಿ ನೆಲೆಸಿರುವ 13 ಕುಟುಂಬಗಳಿಗೆ ಪರ್ಯಾಯ ಸ್ಥಳ ವ್ಯವಸ್ಥೆ ಮಾಡಿ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುವ 66 ಕಾರ್ಮಿಕ ಕುಟುಂಬಗಳಿಗೆ ತಲಾ 20 ಲಕ್ಷದಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚೆ ಮಾಡಲಾಯಿತು.





