
ಬೆಂಗಳೂರು: ಹೈಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದ್ದು ಅದೇನಂದರೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಸಮಯದಲ್ಲಾಗುವ ಅಪಘಾತ ಪ್ರಕರಣಗಳಲ್ಲಿ ಮೂರನೇ ವ್ಯಕ್ತಿಗೆ ವಿಮಾ ಕಂಪನಿಗಳಿಂದ ಪರಿಹಾರದ ಮೊತ್ತ ಪಡೆಯುವುದನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮೋಟಾರು ವಾಹನಗಳ ಕಾಯ್ದೆ-1988ಕ್ಕೆ ತಿದ್ದುಪಡಿ ಮಾಡಬೇಕು ಎಂದು ನಿರ್ದೇಶಿಸಿದೆ.
ಮದ್ಯ ಸೇವಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾಗ ಅಪಘಾತಕ್ಕೆ ಒಳಗಾದ ಪ್ರಕರಣದಲ್ಲಿ ನಗರದ ಪ್ರತೀಕ್ ಕುಮಾರ್ ತ್ರಿಪಾಠಿ ಎಂಬಾತನಿಗೆ 2.59 ಲಕ್ಷ ರು. ಪರಿಹಾರ ಪಾವತಿಸಲು ಆದೇಶಿಸಿದ ಮೋಟಾರು ವಾಹನಗಳ ಅಪಘಾತ ಪರಿಹಾರ ನ್ಯಾಯಾಧೀಕರಣದ ಆದೇಶ ಪ್ರಶ್ನಿಸಿ ಓರಿಯಂಟಲ್ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು ಈ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ.ಎಂ.ಉಮೇಶ್ ಅಡಿಗ ಅವರ ಪೀಠವು ಈ ಪ್ರಕರಣದಲ್ಲಿ ಮೋಟಾರು ವಾಹನ ಚಾಲಕ ಮದ್ಯಪಾನ ಮಾಡಿದ್ದ. ಹಾಗಾಗಿ, ಪರಿಹಾರ ನೀಡಬೇಕಾದ್ದು ವಾಹನದ ಮಾಲೀಕನ ಹೊಣೆಗಾರಿಕೆಯಾಗಿದೆ. ಆದರೆ ನ್ಯಾಯಾಧಿಕರಣವು ಎದುರಿಗೆ ಬಂದ ವಾಹನದ ಅಜಾಗರೂಕತೆಯಿಂದ ಅಪಘಾತ ನಡೆದಿದೆ ಎಂದಿದೆ. ಹೀಗಾಗಿ ಪ್ರತೀಕ್‌ಗೆ ಪರಿಹಾರ ನೀಡಲು ವಿಮೆ ಘೋಷಿಸಿದೆ. ಆದರೆ, ಪ್ರತೀಕ್ ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಿದ್ದ ಅಂಶವನ್ನು ಪರಿಗಣಿಸದೇ ವಿಮಾ ಕಂಪನಿಗೆ ಪರಿಹಾರ ಪಾವತಿಸಬೇಕು ಎಂದು ನ್ಯಾಯಾಧೀಕರಣ ಆದೇಶಿಸಿರುವುದು ಸರಿಯಲ್ಲ. ಆ ಮೊತ್ತವನ್ನು ಕಾನೂನು ಪ್ರಕಾರ ವಾಹನದ ಮಾಲೀಕರಿಂದ ವಸೂಲು ಮಾಡಿಕೊಳ್ಳಬೇಕಿದೆ ಎಂದು ಆದೇಶ ನೀಡಿದೆ.
ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಸಾಮಾಜಿಕ ಅಪರಾಧವಾಗಿದ್ದು ಪರಿಹಾರ ಪಾವತಿಗೆ ವಿಮಾ ಕಂಪನಿಯನ್ನು ಹೊಣೆ ಮಾಡಿ ಆದೇಶ ನೀಡುವುದರಿಂದ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಅಪಾಯಕಾರಿ ಪ್ರವೃತ್ತಿ ಮತ್ತು ಸಾಮಾಜಿಕ ಅಪರಾಧವನ್ನು ಉತ್ತೇಜಿಸಿದಂತಾಗುತ್ತದೆ. ಆದ್ದರಿಂದ ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವ ಪ್ರಕರಣಗಳಲ್ಲಿ ಅಪಘಾತಗಳಾದರೆ ಪರಿಹಾರ ಪಾವತಿ ಹೊಣೆಯಿಂದ ವಿಮಾ ಕಂಪನಿಯನ್ನು ಮುಕ್ತಗೊಳಿಸಲು ಮೋಟಾರು ವಾಹನ ಕಾಯ್ದೆ-1988ಕ್ಕೆ ಸೂಕ್ತ ತಿದ್ದುಪಡಿ ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿದೆ.