
ಮಂಗಳೂರು: ಪುತ್ತೂರಿನ ಬಪ್ಪಳಿಗೆ ನಿವಾಸಿ ಶ್ರೀ ಕೃಷ್ಣ (21) ಎಂಬಾತನ ವಿರುದ್ಧ ಯುವತಿಯೊಬ್ಬಳು ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಇದೀಗ ಮೋಸ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದು ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಆರೋಪಿ ಶ್ರೀಕೃಷ್ಣ ಪುತ್ತೂರಿನ ಹೈಸ್ಕೂಲ್ವೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದು ಅದೇ ಪ್ರೀತಿ ಹಾಗೆಯೇ ಮುಂದುವರೆದಿತ್ತು. ಬಳಿಕ 2024ರ ಅ.11ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿಯನ್ನು ಕರೆದುಕೊಂಡು ಹೋಗಿದ್ದ. ಈ ವೇಳೆ ಮದುವೆಯಾಗುತ್ತೇನೆ ಎಂದು ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ್ದ. ಅದಾದ ಬಳಿಕ 2025ರ ಜನವರಿಯಲ್ಲಿ ಬಲವಂತವಾಗಿ ಯುವತಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದ.
ಕೆಲವು ಸಮಯದ ನಂತರ ಯುವತಿ ಗರ್ಭಿಣಿಯಾಗಿದ್ದು, ಈ ವೇಳೆ ಶ್ರೀಕೃಷ್ಣನಿಂದ ಮದುವೆಯಾಗಲು ನಿರಾಕರಿಸಿದ್ದಾನೆ. ಹೀಗಾಗಿ ಮಂಗಳೂರಿನ ಖಾಸಗಿ ಕಾಲೇಜಿನ ಬಿ.ಎಸ್ಸಿ ಫಾರೆನ್ಸಿಕ್ ಸೈನ್ಸ್ ವಿದ್ಯಾರ್ಥಿನಿ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.






















































