
ಕಾರ್ಕಳ: ಬಹು ದಿನಗಳ ಬೇಡಿಕೆಯಾಗಿದ್ದ ಹಾಗೂ ವಿವಿಧ ಕಾರಣಗಳಿಂದಾಗಿ ಬಾಕಿ ಇದ್ದಂತಹ ಕಬ್ಬಿನಾಲೆ ಗ್ರಾಮದ ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡದ ಮಲೆಕುಡಿಯ ಕಾಲೋನಿ ಮತ್ತಾವು ಸಂಪರ್ಕಿಸುವ ಸೇತುವೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ.02.00 ಕೋಟಿ ಅನುದಾನ ಮಂಜೂರಾಗಿರುತ್ತದೆ ಎಂದು ಕಾರ್ಕಳ ಶಾಸಕರಾದ ಸುನಿಲ್ ಕುಮಾರ್ ಅವರು ತಿಳಿಸಿರುತ್ತಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ತಾಲ್ಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಬ್ಬಿನಾಲೆ ಗ್ರಾಮದ ಮತ್ತಾವು ಪ್ರದೇಶದ ನಿವಾಸಿಗಳು ಮಳೆಗಾಲದಲ್ಲಿ ಸಂದರ್ಭದಲ್ಲಿ ಕಾಡಿನ ಮಧ್ಯ ಹರಿಯುವ ನದಿಯನ್ನು ದಾಟಲು ತುಂಬಾ ಅಪಾಯಕಾರಿಯಾದ ಕಾಲುಸಂಕ ದಾರಿಯನ್ನು ಅವಲಂಬಿಸಬೇಕಾಗಿದೆ. ಇದರಿಂದಾಗಿ ಸದರಿ ಪ್ರದೇಶದ ನಿವಾಸಿಗಳು ಹಾಗೂ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕಾಗಿ ಸೇತುವೆ ಸಹಿತ ರಸ್ತೆ ಅಭಿವೃದ್ಧಿಯು ತೀರಾ ಅವಶ್ಯಕವಾಗಿತ್ತು. ಈ ನಿಟ್ಟಿನಲ್ಲಿ ಮತ್ತಾವು ಕಾಲನಿ ಸಂಪರ್ಕಕ್ಕಾಗಿ ಸರ್ಕಾರದಿಂದ ರೂ.02.00 ಕೋಟಿ ಅನುದಾನ ಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ. ಈ ಸೇತುವೆ ನಿರ್ಮಾಣದಿಂದಾಗಿ ಮಲೆಕುಡಿಯ ಸಮುದಾಯದವರ ಸುಗಮ ಸಂಚಾರಕ್ಕೆ ತುಂಬಾ ಅನುಕೂಲವಾಗುತ್ತದೆ.
ಶಾಸಕರ ನಿರಂತರ ಪರಿಶ್ರಮ ಹಾಗೂ ವಿಶೇಷ ಮುತುವರ್ಜಿಯಿಂದಾಗಿ ಮತ್ತಾವು ಪ್ರದೇಶದ ಅರಣ್ಯದಂಚಿನ ಮಲೆಕುಡಿಯ ಸಮುದಾಯದ ನಿವಾಸಿಗಳ ಕಾಲನಿ ಸಂಪರ್ಕಕ್ಕಾಗಿ ನೂತನ ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕಾಗಿ ಇದೀಗ ರೂ.02.00 ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿಯು ಅತೀ ಶೀಘ್ರವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಕಾರ್ಕಳ ಶಾಸಕರ ʻವಿಕಾಸʼ ಜನಸೇವಾ ಕಛೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.