
ನವದೆಹಲಿ: ಮುಂಬರುವ ವಿಧಾನಸಭೆ ಹಾಗೂ ಉಪ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗ ಮಹತ್ವದ ನಿರ್ಧಾರ ಪ್ರಕಟಿಸಿದೆ. ಮತದಾನ ದಿನ ಎಲ್ಲಾ ಉದ್ಯೋಗಿಗಳು, ದಿನಗೂಲಿ ಕಾರ್ಮಿಕರು ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ವಲಯದ ನೌಕರರಿಗೆ ವೇತನ ಸಹಿತ ರಜೆ ನೀಡುವುದು ಕಡ್ಡಾಯವೆಂದು ಘೋಷಿಸಲಾಗಿದೆ. ಪೀಪಲ್ ಆ್ಯಕ್ಟ್ 1951ರ 135ಬಿ ವಿಧಾನದಡಿ ಈ ಆದೇಶ ಜಾರಿಯಾಗಿದೆ.
ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಆಯೋಗ ಈ ಕ್ರಮ ಕೈಗೊಂಡಿದ್ದು, ಹಿಂದೆ ಹಲವೆಡೆ ಮತದಾನ ದಿನ ರಜೆ ಇರದ ಕಾರಣ ಉದ್ಯೋಗಿಗಳು ಮತಚಲಾಯಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗುತ್ತಿತ್ತು. ಇನ್ನು ಮುಂದೆ ಯಾವುದೇ ಸಂಸ್ಥೆ ರಜೆ ನೀಡುವುದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕರ್ನಾಟಕದಲ್ಲೂ ಈ ನಿಯಮ ಅನ್ವಯವಾಗಲಿದೆ. ದಾವಣೆಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಏಪ್ರಿಲ್ 9ರಂದು ನಡೆಯಲಿರುವ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಆ ದಿನ ಮತದಾನಕ್ಕೆ ಸಂಬಂಧಿಸಿದವರಿಗೆ ವೇತನ ಸಹಿತ ರಜೆ ಲಭ್ಯವಾಗಲಿದೆ.
ಇದೇ ವೇಳೆ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ನಡೆಯಲಿರುವ ಚುನಾವಣೆಗಳ ಹಿನ್ನಲೆಯಲ್ಲಿ ದೇಶಾದ್ಯಂತ ಈ ಕ್ರಮ ಜಾರಿಗೊಳಿಸಲಾಗಿದೆ. ಮತದಾನದಲ್ಲಿ ಯಾರೂ ವಂಚಿತರಾಗದಂತೆ ಮಾಡಲು ಆಯೋಗ ಮುಂದಾಗಿದೆ.
ಆದೇಶವನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯೋಗ ಎಚ್ಚರಿಸಿದ್ದು, ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡುವುದು ಕಾನೂನುಬದ್ಧ ಕಡ್ಡಾಯವೆಂದು ತಿಳಿಸಿದೆ.









