
ಪಟ್ಟಣಂತಿಟ್ಟ: ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ವಾರ್ಷಿಕ ಮಕರಜ್ಯೋತಿ ದರ್ಶನ ಇಂದು ನಡೆಯಲಿದೆ. ಈ ಪವಿತ್ರ ಸಂದರ್ಭಕ್ಕಾಗಿ ದೇಗುಲ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿಶೇಷ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಈ ಬಾರಿ ಸಂಕ್ರಾಂತಿ 14ರ ಮಧ್ಯಾಹ್ನದಿಂದ ಆರಂಭವಾಗುವ ಕಾರಣ, 14ರ ಸಂಜೆ ಪೊನ್ನಂಬಲಮೇಡು ಪರ್ವತದ ಮೇಲೆ ಮಕರಜ್ಯೋತಿ ಕಾಣಿಸಿಕೊಳ್ಳಲಿದೆ. ಭಕ್ತರ ಸಂಖ್ಯೆಗೆ ಮಿತಿ ವಿಧಿಸಲಾಗಿದ್ದು, 30,000 ಆನ್‌ಲೈನ್ ಹಾಗೂ 5,000 ಕೌಂಟರ್ ಟಿಕೆಟ್ ಹೊಂದಿರುವವರಿಗೆ ಮಾತ್ರ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಭಕ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು 2000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅವರೊಂದಿಗೆ 136 ಸ್ವಯಂಸೇವಕರು ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು 31 ತುರ್ತು ವಾಹನಗಳ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಟಿಡಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



















