31.7 C
Udupi
Friday, March 13, 2026
spot_img
spot_img
HomeBlogಮಂಗಳ

ಮಂಗಳ

ಕಥೆ (ಭಾಗ- 40)

ಚೇತನ್ ವರ್ಕಾಡಿ

ಮಧುವಿನ ಮೊಬೈಲ್‌ಗೆ ಮಿಥುನ್‌ನ ಕರೆ ಬಂದಿತು.ಖುಷಿ‌ಯಿಂದ ತನ್ನ ಗೆಳೆಯನ ಕರೆಯನ್ನು ಸ್ವೀಕರಿಸಿದ ಮಧುವಿಗೆ ಕಾಲ್ ರಿಸೀವ್ ಮಾಡುತ್ತಿದ್ದಂತೆಯೆ ಮಿಥುನ್‌ನ ಬೈಗುಳದ ಮಾತುಗಳೆ ಕೇಳಿಸತೊಡಗಿತು.ಯಾರದರೂ ತಪ್ಪಿ ಕರೆ ಮಾಡಿರಬಹುದೆ ಎಂದು ಮತ್ತೆ ಪರೀಕ್ಷಿಸಿದರೂ ಅದು ಮಿಥುನ್‌ನ ಕರೆಯೆಂದು ದೃಢ ಪಟ್ಟಿತು.ಜೀವದ ಗೆಳೆಯನ ಬಾಯಿಯಿಂದ ಮೊದಲ ಬಾರಿಗೆ ಸತ್ಯಕ್ಕೆ ದೂರವಾದ ಸಾವಿರ ಪದಗಳು ಕ್ಷಣದೊಳಗೆ ಆತನ ಕಿವಿಗೆ ಅಪ್ಪಳಿಸಿತು.ತಾನೆ ಮುಂದೆ ನಿಂತು ಗೆಳೆಯನ ಮದುವೆಯನ್ನು ಮಾಡಬೇಕೆಂದಿದ್ದ ಮಧುವಿಗೆ ಮಿಥುನ್‌ನ ಮಾತುಗಳನ್ನು ಕೇಳಿ ಹೃದಯವೇ ಒಡೆದಂತಾಯಿತು.ಕಣ್ಣೀರ ಹನಿಗಳು ತನಗೆ ತಿಳಿಯದಂತೆಯೆ ತನ್ನ ಕೆಲಸವನ್ನು ಸರಾಗವಾಗಿ ಆರಂಭಿಸಿದವು.ಎಲ್ಲವೂ ನಿನ್ನಿಂದಲೇ ಆಗಿ ಹೋಯಿತು ನಂಬಿಕೆದ್ರೋಹಿ ನೀನು ಇನ್ನೆರಡು ದಿನಗಳಲ್ಲಿ ನನ್ನ ಮದುವೆ ಇದೆ ಆಂಟಿ ಆಂಕಲ್‌ಗೆ ತಿಳಿಸು ನೀನು ಮಾತ್ರ ಬರಕೂಡದು ಎಂದು ಹೇಳಿದವನೆ ಪೋನ್ ಕಟ್ ಮಾಡಿಯೆಬಿಟ್ಟ..
ಮುಗ್ದ ಮನಸಿನ ಮಧುವಿಗೆ ಇದು ಸಾಕಾಗಿತ್ತು, ಕೇವಲ ಪ್ರೀತಿಸಿದ್ದೆ ತಪ್ಪಾಯಿತ….?ಅದೂ ಬೇಡವೆಂದು ದೂರ ಉಳಿದರೆ ಮತ್ತೆ ಮತ್ತೆ ಮಾಡದ ತಪ್ಪಿಗೆ ಕೇಳಬಾರದ ಮಾತನ್ನು ಜೀವದ ಗೆಳೆಯನ ಬಾಯಿಯಿಂದ ಕೇಳಿದೆನಲ್ಲ ಇನ್ನೇನು ಉಳಿದಿದೆ ಎಂದು ತುಂಬಿದ ನೋವನ್ನೆಲ್ಲ ಕಣ್ಣೀರಿನ ಮೂಲಕ ಹೊರಹಾಕಿದ ನಂತರ ಮಿಥುನ್ ಕರೆ ಮಾಡಿ ಮದುವೆಗೆ ಕರೆದ ವಿಚಾರವನ್ನು ತನ್ನ ತಂದೆತಾಯಿಗೆ ತಿಳಿಸಿದ.
ದಿನೆಗಳೆರಡು ಕಳೆದು ಮದುವೆದಿನ ಬಂದೇಬಿಟ್ಟಿತು.ದೂರದಿಂದ ಮಿಥುನ್‌ನ ಗೆಳೆಯ ಪ್ರತಾಪ್ ಕೂಡ ತನ್ನ ಗೆಳೆಯನ ಮದುವೆಗೆ ಹೊರಟಿದ್ದ.ಸುಗಂಧಿ ಮತ್ತು ಸೋಮಶೇಖರ‌ರಾಯರು ಮದುವೆಗೆ ಹೊರಡಲು ರೆಡಿಯಾಗಿ ಹೊರಬಂದರೂ ಮಧು ಏನೊ ಕಳೆದವನಂತೆ ಕುಳಿತಲ್ಲಿಯೆ ಕುಳಿತಿದ್ದ.ಇದನ್ನು ನೋಡಿದ ಸುಗಂಧಿ, ಅಲ್ಲ ಕಣೊ ಮಧು ಈಗೀಗ ನನಗೆ ಎಲ್ಲವೂ ವಿಚಿತ್ರ‌ವಾಗಿ ಕಾಣುತ್ತಿದೆ! ಮಿಥುನ್ ಬೇರೆ ಅಲ್ಲ ನೀನು ಬೇರೆ ಅಲ್ಲ ಆದರೆ ಈಗೀಗ ಮಿಥುನ್ ಮತ್ತು ನಿನ್ನಲ್ಲಿ ಆ ಸ್ನೇಹ‌ವೆ ಕಾಣುತ್ತಿಲ್ಲ,ಮದುವೆಗೆ ಕೂಡ ಯಾರಿಗೂ ತಿಳಿಯದಂತೆ ಬೇರ್ಯಾರನ್ನೋ ಕರೆದಂತೆ ನಮ್ಮನ್ನು ಆಹ್ವಾನಿಸಿ‌ದ್ದಾನೆ ಅದೂ ಅಲ್ಲದೆ ನೀನು ಯಾವುದಕ್ಕೂ ಹೋಗಿಲ್ಲ ಮದುವೆಯ ಸಂಭ್ರಮ‌ವೆ ಕಾಣುತ್ತಿಲ್ಲ ಏನೊ ಇದೆಲ್ಲ ಎಂದು ಕೇಳಿದಾಗ,ಏನು ಇಲ್ಲಮ್ಮ ನೀವು ಹೋಗಿ ನಾನು ಆಮೇಲೆ ಬರ್ತೀನಿ ಎಂದು ಕೆಳಜಾರಿದ ಕಣ್ಣೀರ ಹನಿಯನ್ನು ಅವರಿಗೆ ತಿಳಿಯದಂತೆ ಒರಸಿ ತನ್ನ ರೂಮಿನತ್ತ ಹೆಜ್ಜೆ ಹಾಕಿದ.ಸುಗಂಧಿ ಮತ್ತು ಸೋಮಶೇಖರ‌ರಾಯರು ಮದುವೆಗೆ ಹೊರಟರು.ರೂಮಿಗೆ ಬಂದ ಮಿಥುನ್‌ ತನ್ನ ಪರ್ಸನಲ್ ಡೈರಿಯನ್ನು ತೆಗೆದು ಪುಟ ಬಿಡಿಸುತ್ತಿದ್ದಂತೆಯೆ ಮಂಗಳಳ ಮುಖ ನೋಡಿದ ಆ ಮೊದಲದಿನದ ಪುಟ ಕಣ್ಣೆದುರು ಬಂದಾಗ ಪುಟದೊಳಗಿನಿಂದ ಮಂಗಳ ನಗುತ್ತಿರುವ ದೃಶ್ಯ ಅವನ ಕಣ್ಣೆದುರಿಗೆ ಬಂತು.ಡೈರಿ ಮುಚ್ಚಿ ತೃಪ್ತಿ‌ಯಾಗುವಷ್ಟು ಅತ್ತ.ಗೆಳೆಯನ ಮದುವೆ ಸಂಭ್ರಮ‌ವನ್ನು ನೋಡಲು ಅವಕಾಶ ಸಿಗದಾಯಿತು ಎಂದು ಕೊರಗಿದ.ಸಿಗದ ಪ್ರೀತಿ ಕಳಕೊಂಡ ಸ್ನೇಹ ಎರಡರ ನೋವನ್ನು ತನ್ನ ಬ್ಯಾಗಿನೊಳಗೆ ತುಂಬಿಸಿಕೊಂಡು ತನ್ನ ಊರನ್ನೇ ಬಿಡಲು ನಿರ್ಧರಿಸಿ ಡೈರಿ ಮತ್ತು ಒಂದೆರಡು ಬಟ್ಟೆಬರೆಯೊಂದಿಗೆ ಉಟ್ಟಬಟ್ಟೆಯಲ್ಲೇ ಮನೆಬಿಟ್ಟು ಬಸ್‌ತಂಗುದಾಣದತ್ತ ಕಾಲ್ನಡಿಗೆಯಲ್ಲಿ‌ಯೆ ಹೆಜ್ಜೆಹಾಕಿದ…
ಮದುವೆ‌ಮಂಟಪದಲ್ಲಿ ಮದುವೆ ಸಂಭ್ರಮ ಜೋರಾಗಿ‌ಯೆ ಕಾಣುತ್ತಿತ್ತು.ಸೌಂಧರ್ಯಳಂತು ತಾನೆ ಗೆದ್ದಂತೆ ಬೀಗುತ್ತಿದ್ದಳು.ಸುಳ್ಳಿನ ಮೂಟೆಯೊಳಗೆ ಸತ್ಯಕತೆ ಹೊರಬರಲಾಗದೆ ಯಾರು ತನ್ನನ್ನು ಬಿಡಿಸಲು ಬರುವರೋ ಎಂದು ಕಾಯುತ್ತಿತ್ತು.ಎಲ್ಲರೂ ಬಂದು ಸೇರಿದರು.ಮಂಗಳಳ ಮುಖದಲ್ಲಿ ಮದುಮಗಳ ಸಂಭ್ರಮ‌ವೇ ಕಾಣಲಿಲ್ಲ.ಹೆತ್ತವರ ಒತ್ತಾಯ‌ದ ಮೇರೆಗೆ ಹಸೆಮಣೆ‌ಯೇರಿ ಕುಳಿತಿದ್ದಾಳೆ ಅಷ್ಟೆ. ಪಕ್ಕದಲ್ಲಿ ಮಿಥುನ್ ರಾಜಕುಮಾರ‌ನಂತೆ ಶೃಂಗಾರ‌ವಾಗಿ ಕುಳಿತಿದಿದ್ದಾನೆ.ಇನ್ನೇನು ಮದುವೆ ಶಾಸ್ತ್ರ ಆರಂಭವಾಗಬೇಕೆಂದರೆ ದೂರದಿಂದ ಮದುವೆ ಮಂಟಪದೊಳಗೆ ಬರುತ್ತಿದ್ದ ಸುಗಂಧಿ ಮತ್ತು ಸೋಮಶೇಖರರಾಯರನ್ನು ನೋಡಿದ ಮಂಗಳಳ ಮುಖದಲ್ಲಿ ಒಂದಷ್ಟು ನಗು ಮೂಡಿತು.ಮಂಟಪದಲ್ಲಿ ಇದ್ದೇನೆ ಎಂಬುದನ್ನೆ ಮರೆತು ಪಕ್ಕನೆ ಎದ್ದು ಅವರ ಬಳಿ ಓಡೋಡಿ ಬಂದಾಗ! ಅವರಿಗೆ ಆಶ್ಚರ್ಯ‌ವಾಯಿತು.ಮಿಥುನ್‌ನ ಕೈಹಿಡಿಯುವ ಹೆಣ್ಣು ನೀನ ಮಂಗಳ ಎಂದು ಆಶ್ಚರ್ಯ‌ವಾಗಿ ಸುಗಂಧಿ ಕೇಳಿದಾಗ ಅವರ ಮಾತಿಗೆ ಉತ್ತರಿಸದೆ ನಿಮ್ಮ ಮಗ ಹೇಗಿದ್ದಾರಮ್ಮ ಅವರು ಬರೋದಿಲ್ವ ಮದುವೆಗೆ ಎಂದು ತನ್ನ ಪ್ರಶ್ನೆ‌ಯನ್ನೇ ಅವರ ಮುಂದಿಟ್ಟಳು.ಬರುತ್ತಾನೆ ಕಾಣಮ್ಮ ನೀನ್ಯಾಕೆ ಹಸೆಮಣೆ ಬಿಟ್ಟು ಇಲ್ಲಿಗೆ ಬಂದೆ ಹೋಗು ಪುರೋಹಿತರು ಕಾಯ್ತಾ ಇದ್ದಾರೆ ಎಂದು ಕಳುಹಿಸಿ ಕೊಟ್ಟರು.ಈ ಮಂಗಳ ಹೇಗೆ ಮಿಥುನ್‌ನಿಗೆ ಪರಿಚಯ ಎಲ್ಲಾ ಗೊತ್ತಿದ್ದೆ ನಮ್ಮ ಮಧುವಿನ ಆರೈಕೆಗೆ ಕಳುಹಿಸಿರಬೇಕು!ಏನೆ ಆಗಲಿ ನಮ್ಮ ಮಧುವಿಗು ಇಂತಹ ಹುಡುಗಿಯೆ ಸಿಕ್ಕರೆ ಸಾಕು ಎಂದು ಗಂಡನಲ್ಲಿ ಹೇಳುತ್ತಾ ಎದುರುಗಡೆ ಬಂದು ಕುಳಿತರು..
ಮಧು ಮಾರ್ಗ‌ದಲ್ಲಿ ನಡೆದು ಕೊಂಡು ಹೋಗುತ್ತಿದ್ದರೆ!ಕಾರೊಂದು ವೇಗವಾಗಿ ಬಂದು ಸ್ವಲ್ಪ ಮುಂದೆ ಹೋದಂತೆಯೇ ಸಡನ್ನಾಗಿ ನಿಂತುಬಿಟ್ಟಿತು.ಕಾರಿನಲ್ಲಿ ಇದ್ದವರು ಬೇರೆ ಯಾರೂ ಆಗಿರಲಿಲ್ಲ,ಡಾ!ಪ್ರತಾಪ್ ಮಿಥುನ್‌ನ ಮದುವೆಗೆ ಸಮಯ ಮೀರಿರುವುದರಿಂದ ಅವಸರವಸರವಾಗಿ ಹೊರಟಿದ್ದ.ಮಧುವನ್ನು ನೋಡಿದಾಗ ಕೂಡಲೆ ಅವನಿದ್ದ ಪರಿಸ್ಥಿತಿ‌ಯಲ್ಲಿ ಗುರುತು ಸಿಗದೆ ಮುಂದೆ ಬಂದಿದ್ದ.ಕಾರಿನಿಂದ ಇಳಿದ ಪ್ರತಾಪ್‌ನ ಪರಿಚಯ ಮಧುವಿಗೆ ಸಿಗಲಿಲ್ಲ.ಹೌದು ಪ್ರತಾಪ್ ಮನೆಯಲ್ಲಿದ್ದಾಗ ಮಧು ಈ ನೆನಪಿನ ಶಕ್ತಿಯನ್ನೇ ಕಳೆದುಕೊಂಡಿದ್ದ.ಯಾರು ನೀವು ಎಂದು ಮಧು ಕೇಳಿದಾಗ ಬನ್ನಿ ಪಕ್ಕದೂರಿಗೆ ಹೋಗುತ್ತಿದ್ದೇನೆ ನೀವೂ ಆ ಕಡೆ ತಾನೆ ಎಂದು ಒತ್ತಾಯವಾಗಿ ಮಧುವನ್ನು ಕಾರಿನಲ್ಲಿ ಕುಳ್ಳಿರಿಸಿದ.ಎಲ್ಲಿಗೆ ಹೋಗಬೇಕೋ ಎಂದು ತಿಳಿಯದ ಮಧು ಹೋದಲ್ಲಿಗೆ ಹೋಗಲಿ ಎಂದು ಕುಳಿತೇಬಿಟ್ಟ.ಪ್ರತಾಪ್‌ನಿಗೆ ಮಧುವನ್ನು ನೋಡಿ ನೋವು ಸಂಕಟ ತಡೆಯಲಾಗಲಿಲ್ಲ ಇದೆಕ್ಕೆಲ್ಲ ಕಾರಣವೇನೆಂದು ತಿಳಿಯದೆ ಎಲ್ಲವನ್ನೂ ಅಲ್ಲೇ ವಿಚಾರಿಸಿದರಾಯ್ತು ಎಂದು ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದ..
ಶಾಸ್ತ್ರ‌ವೆಲ್ಲವೂ ಮುಗಿದು ಇನ್ನೇನು ತಾಳಿಕಟ್ಟಲು ಕ್ಷಣಗಣನೆ ಅಷ್ಟೇ. ಕಾರು ಬಂದು ಮದುವೆ ಮಂಟಪದಲ್ಲಿ ನಿಂತಿತು.ಮಧುವಿಗೆ ಎಲ್ಲವೂ ಆಶ್ಚರ್ಯ!ಮಂಟಪದ ಹೊರಗಡೆ ಹೆಸರು ನೋಡಿದರೆ ಶುಭವಿವಾಹ ಮಂಗಳ ಮತ್ತು ಮಿಥುನ್ ಎಂದು ಬರೆದಿತ್ತು.ಸರ್ ನೀವು ಈ ಮದುವೆಗೆ ಬಂದ್ರಾ…?ಎಂದು ಮಧು ಕೇಳಿದಾಗ!ಹೌದು ನೀವು ಕೂಡ ಇಲ್ಲಿಗೆ ಹೊರಟಿದ್ದು ಅಲ್ವ ಬನ್ನಿ ಮಧು ಒಳಗಡೆ ಎಂದು ಬಲವಂತವಾಗಿ ಕೈ ಹಿಡಿದು ಒಳಗಡೆ ಕರೆದುಕೊಂಡು ಬರಬೇಕಾದರೆ!ಹಸೆಮಣೆ‌ಯಲ್ಲಿದ್ದ ಮಂಗಳ ಪ್ರತಾಪ್‌ನ ಕಣ್ಣಿಗೆ ಬಿದ್ದಳು.ಮಂಗಳಳ ಕಣ್ಣಿಂದ ಅವಳಿಗೆ ತಿಳಿಯದಂತೆಯೆ ಕಣ್ಣೀರು ಜಾರುತ್ತಿತ್ತು. ಕಣ್ಣುಮುಚ್ಚಿ ತಲೆತಗ್ಗಿಸಿ ಬಿಟ್ಟಿದ್ದಳು.ಇನ್ನೇನು ಮಿಥುನ್ ತಾಳಿಕಟ್ಟ ಬೇಕೆನ್ನುವಷ್ಟರಲ್ಲಿ!ನಿಲ್ಲಿಸಿ ಎಂದು ಪ್ರತಾಪ್ ಬೊಬ್ಬೆ ಹಾಕಿದ.ಮಧುವಿನ ಕೈ ಹಿಡಿದು ಮುಂದೆ ಮುಂದೆ ಬರುತ್ತಿದ್ದ ಪ್ರತಾಪ್‌ನನ್ನು ನೋಡಿ ಎಲ್ಲರಿಗೂ ಆಶ್ಚರ್ಯ‌ವಾದರೆ!ಮಂಗಳಳಿಗೆ ಮಧವನ್ನು ಕಂಡಕೂಡಲೆ ತಾನೇನೊ ಕಳೆದುಕೊಳ್ಳುತ್ತಿದ್ದ ವಸ್ತು ಮತ್ತೆ ಸಿಕ್ಕಿದಂತಹ ಖುಷಿ. ಮಧುವನ್ನು ನೋಡಿದ ಕೂಡಲೆ ಮಿಥುನ್‌ನ ಕೋಪ ನೆತ್ತಿಗೇರಿತು.ಪ್ರತಾಪ್‌ನಲ್ಲಿ ಆತನ ಅಲ್ಲಸಲ್ಲದ ಅಪವಾದವನ್ನು ಮುಂದಿಟ್ಟಾಗ!ಈ ಮಾತುಗಳನ್ನು ನಿನಗೆ ಯಾರು ಹೇಳಿದವರು ಎಂದು ಪ್ರತಾಪ್ ಕೇಳಿದಾಗ,ಮಿಥುನ್ ಕೈಬೆರಳು ಸೌಂಧರ್ಯ‌ಳತ್ತ ತಿರುಗಿತು.ಮುಖತಿರುಗಿಸಿದ ಸೌಂಧರ್ಯ‌ಳ ಮುಖವನ್ನು ಸರಿಯಾಗಿ ನೋಡೋಣ‌ವೆಂದು ಅವಳ ಮುಂದೆ ಬಂದರೆ ಅವಳು ಬೇರೆ ಯಾರೂ ಆಗಿರಲಿಲ್ಲ ಕಾಲೇಜು ದಿನಗಳಲ್ಲಿ ಪ್ರತಾಪ್‌ನ ಬದುಕಿನಲ್ಲಿ ಹುಚ್ಚು ಪ್ರೀತಿಯನ್ನು ಹುಟ್ಟಿಸಿ ಅದು ಬೇಡವೆನಿಸಿದಾಗ ಮತ್ತೊಬ್ಬನ ಜೊತೆ ಹೋದವಳು.ಬಂದ ಕೋಪಕ್ಕೆ ಪ್ರತಾಪ್ ಸೌಂಧರ್ಯ‌ಳ ಕೆನ್ನೆಗೆ ಬಾರಿಸಿಯೆ ಬಿಟ್ಟ.ಪ್ರತಾಪ್ ಸೌಂದರ್ಯ‌ಳ ಬಯೋಡಾಟವನ್ನೇ ಮಿಥುನ್‌ನಲ್ಲಿ ವಿವರಿಸಿದರೂ ನಂಬದೆ ಹೋದಾಗ ಕೋಪಗೊಂಡ ಪ್ರತಾಪ್ ಮತ್ತೊಂದು ಕೆನ್ನೆಗೆ ಬಾರಿಸಿದ, ಸೌಂಧರ್ಯ ಮಧು ಮಂಗಳಳ ವಿಷಯದಲ್ಲಿ ತಾನು ಹೇಳಿದ ಮಾತುಗಳು ಸುಳ್ಳೆಂದು ಒಪ್ಪಿದಾಗ!ಮಿಥುನ್ ಕುಗ್ಗಿಹೋದ.ಪ್ರತಾಪ್ ಮಾತುಮುಂದುವರಿಸಿದ….
ನೋಡು ಮಿಥುನ್ ಮಂಗಳಳನ್ನು ನೋಡಿದರೆ ಯಾರು ಬೇಕಾದರೂ ಇಷ್ಟ ಪಡಬಹುದು ಅಂತಹ ಅಪ್ಸರೆ ಅವಳು.ಆದರೆ ನಿನಗಿಂತ ಮೊದಲು ಒಂದು ಜೀವ ಆಕೆಯನ್ನು ಹೃದಯದೇಗುಲದ‌ಲ್ಲಿ ಇಟ್ಟು ಪೂಜಿಸಲು ಆರಂಭಿಸಿದೆ,ಆ ಹೃದಯ ಬೇರೆ ಯಾರದೂ ಅಲ್ಲ ನಿನ್ನ ಆಪ್ತ‌ಮಿತ್ರ ಮಧುವಿನದ್ದು.ಇಷ್ಟೆಲ್ಲ ವಿಚಾರ ನನಗೆ ಹೇಗೆ ತಿಳಿಯಿತೆಂದು ಆಶ್ಚರ್ಯ ಆಗಿರಬಹುದಲ್ಲ!ಹೇಳ್ತಿನಿ ಕೇಳಿ,ಮಧುವಿನ ಟ್ರೀಟ್‌ಮೆಂಟಿಗೆಂದು ನಿಮ್ಮ ಮನೆಯಲ್ಲಿದ್ದಾಗ ಒಂದು ದಿನ ಮಂಗಳ ಕಪಾಟನ್ನು ಕ್ಲೀನ್ ಮಾಡುತ್ತಿರಬೇಕಾದರೆ ಈ ಡೈರಿ ಅವಳಿಗೆ ಸಿಕ್ಕಿತು.ಅಕ್ಷರಜ್ಞಾನವಿಲ್ಲದ ಆಕೆಗೆ ಅದರಲ್ಲಿರುವ ಪ್ರೇಮಸಂದೇಶವನ್ನು ಓದಲಾಗಲಿಲ್ಲ.ನಾನು ತೆಗೆದು ಓದಿದೆ!ಮಧುವಿನ ಮಂಗಳ ಅವಳೇ ಎಂದು ಆ ಡೈರಿಯನ್ನು ಓದುತ್ತಿದ್ದಂತೆಯೇ ತಿಳಿಯಿತು.ಆಕೆಯನ್ನೆ ಅವನ ಆರೈಕೆ‌ಗೆ ಬಿಟ್ಟರೆ ಖಂಡಿತ ಗುಣವಾಗುತ್ತಾನೆ ಎಂದು ನಾನು ಸುಳ್ಳು ಹೇಳಿ ಅರ್ಜೆಂಟ್ ಕೆಲಸ ಇದೆ ಎಂದು ಮತ್ತೆ ಅಮೇರಿಕಾಕ್ಕೆ ಹಾರಿದೆ.ನಾನು ಯೋಚಿಸಿ‌ದಂತೆಯದಂತೆಯೇ ನಿಜವೂ ಆಯಿತು ಒಂದು ತಿಂಗಳಲ್ಲಿ ನನ್ನ ಮೆಡಿಸಿನ್‌ಗೆ ಸಿಗದ ಫಲ ಮಂಗಳಳ ಆರೈಕೆ‌ಗೆ ಸಿಕ್ಕಿತು.ಮಧು ಮೊದಲಿನಂತಾದ.ಇದಕ್ಕೆಲ್ಲ ಕಾರಣ ಅವನಲ್ಲಿದ್ದ ಪ್ರೀತಿ.ಇವತ್ತು ಕೂಡ ನಾನು ಬರೋದು ಸ್ವಲ್ಪ ತಡವಾಗಿದ್ದರೂ ಮಧು ಮತ್ತೆ ಅದೇ ಪರಿಸ್ಥಿತಿ‌ಗೆ ಹೋಗುತ್ತಿದ್ದ ಅದೃಷ್ಟವಶಾತ್ ಅದು ತಪ್ಪಿ ಹೋಯಿತು.ನೋಡು ಮಿಥುನ್ ಮಧುವಿನ ಮನಸು ಬಂಗಾರ ಯಾವತ್ತು ನೀನು ಮಂಗಳಳನ್ನು ನೋಡೋಕೆ ಹೋದಿಯೆ ಅಂದಿನಿಂದ ಯಾರಿಗೂ ತಿಳಿಸದೆ ತನ್ನ ಹೃದಯದಲ್ಲಿ ಇದ್ದ ಪ್ರೀತಿಯನ್ನು ಮುಚ್ಚಿಟ್ಟು ಮರೆಯಲಾರಂಭಿಸಿದ,ಅದು ಅವನಿಂದ ಸಾಧ್ಯವಾಗದೆ ಹುಚ್ಚನಂತಾದ.ಇವತ್ತು ಮತ್ತೆ ಎಲ್ಲವನ್ನೂ ಬಿಟ್ಟು ಎಲ್ಲಿಗೋ ಹೊರಟಿದ್ದ ಅವನನ್ನು ನಿನ್ನ ಮುಂದೆ ತಂದು ನಿಲ್ಲಿಸಿದ್ದೇನೆ ಮುಂದಿನದು ನಿನಗೆ ಬಿಟ್ಟದ್ದು ಎಂದು ಹೇಳಿ ಮಧುವಿನ ಕೈ ಬಿಟ್ಟ…ಮಿಥುನ್‌ನ ಕಣ್ಣುಗಳಲ್ಲಿ ಕಣ್ಣೀರು ಜಾರಿ ಹೋಯಿತು.ಜೀವದ ಗೆಳೆಯನ ಮೇಲೆ ಸಂದೇಹ ಬರುವಂತೆ ಮಾಡಿದ ಸೌಂಧರ್ಯ‌ಳಿಗೆ ಮತ್ತೆರಡು ಬಾರಿಸಿದ!ನೋವು ತಾಳಲಾರದೆ ಅಮ್ಮಾ ಎಂದು ಅತ್ತಳು.ತನ್ನ ತಪ್ಪಿನ ಅರಿವಾಗಿ ಎಲ್ಲರಲ್ಲಿ ಕ್ಷಮೆ ಕೋರಿದಳು.ಮಿಥುನ್ ಮಧುವಿನ ಕಾಲು ಹಿಡಿದು ಕ್ಷಮೆ ಕೇಳಿ ಮಂಗಳಳಿಗೆ ನೀನೆ ಸರಿಯಾದ ಜೋಡಿ ಹಸೆಮಣೆ ಏರಿ ಕುಳಿತು ಕೋ ಗೆಳೆಯ ಎಂದು ಅಂಗಲಾಚಿ ಬೇಡಿದ.ಏನೂ ಮಾತನಾಡದೆ ಮಧು ಅಲ್ಲಿಂದ ಅವನಷ್ಟಕೆ ಹೊರಡಬೇಕಾದರೆ ಅವನ ಹಿಂದೆಯೇ ಮಂಗಳ ಕೂಡ ಹೊರಟು ಬಿಟ್ಟಳು.ಎಲ್ಲರೂ ಅವರನ್ನೆ ಮರೆಯಾಗುವ ತನಕ ನೋಡುತ್ತಾ ನಿಂತು ಬಿಟ್ಟರು…

ಮುಗಿಯಿತು.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page