
ಮಂಗಳೂರು: ಜೂನ್ 4ರಂದು ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜು & ಆಸ್ಪತ್ರೆಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು ಇದೀಗ ಕಾಲೇಜಿನ ವಿದ್ಯಾರ್ಥಿನಿಯೇ ಹುಸಿ ಬಾಂಬ್ ಬೆದರಿಕೆ ಹಾಕಿರುವ ವಿಚಾರ ಬಯಲಾಗಿದೆ.
ಉಳ್ಳಾಲದ ದೇರಳಕಟ್ಟೆ ಕಣಚೂರು ಮೆಡಿಕಲ್ ಕಾಲೇಜಿಗೆ ಬಾಂಬ್ ಬ್ಲಾಸ್ಟ್ ಬೆದರಿಕೆ ಕರೆ ಬಂದಿದ್ದು ಆಸ್ಪತ್ರೆಗೆ ಬಾಂಬ್ ಇರಿಸಲಾಗಿದೆ, 11 ಗಂಟೆಯ ಒಳಗೆ ಆಸ್ಪತ್ರೆ ಖಾಲಿ ಮಾಡಬೇಕೆಂದು ಬೆದರಿಕೆ ಹಾಕಲಾಗಿತ್ತು. ಈ ಕುರಿತು ಆಸ್ಪತ್ರೆಯ ಆಡಳಿತಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ
ಸಂಪೂರ್ಣ ಆಸ್ಪತ್ರೆ ಹಾಗೂ ಕಾಲೇಜನ್ನು ಪರಿಶೀಲನೆ ಮಾಡಿತ್ತು. ಈ ವೇಳೆ ಇದೊಂದು ಹುಸಿ ಬಾಂಬ್ ಕರೆ ಎಂಬುದು ಖಚಿತವಾಗಿದೆ.
ಆಸ್ಪತ್ರೆಯ ಪ್ರಸವ ಕೊಠಡಿಯ ಫೋನಿಗೆ ಬೆಳಗ್ಗೆ 11 ಗಂಟೆಗೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ 5 ಬಾರಿ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಗೆ ಪಿಜಿ ವಿದ್ಯಾರ್ಥಿನಿ ಚಲಸಾನಿ ಮೋನಿಕಾ ಚೌಧರಿ ಎಂಬಾಕೆ ದೂರು ನೀಡಿದ್ದು ಆರೋಪಿ ಪತ್ತೆಗಾಗಿ ವಿಶೇಷ ತಂಡಗಳನ್ನ ರಚಿಸಿ ಪೊಲೀಸರು ತನಿಖೆಗಿಳಿದಿದ್ದರು. ಈ ವೇಳೆ ದೂರುದಾರೆಯಿಂದಲೇ ಹುಸಿ ಬಾಂಬ್ ಬೆದರಿಕೆ ಎಂಬ ವಿಚಾರ ಬೆಳಕಿಗೆ ಬಂದಿದೆ. ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಸೆಮಿನಾರ್ ತಪ್ಪಿಸುವ ಉದ್ದೇಶದಿಂದ ಹುಸಿ ಬಾಂಬ್ ಬೆದರಿಕೆ ಹಾಕಿದ್ದಾಳೆ ಎಂದು ತಿಳಿದು ಬಂದಿದ್ದು ಈಗ ವಿದ್ಯಾರ್ಥಿನಿಯನ್ನ ಬಂಧಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





