
ಹೊಸದಿಲ್ಲಿ: ಜೂನ್ 19ರಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಅದೇನೆಂದರೆ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಸರ್ಕಾರಿ ಅಧಿಕಾರಿಯೊಬ್ಬರು ಆರೋಪ ಮುಕ್ತರಾಗುವವರೆಗೆ ಮತ್ತೆ ಸೇವೆಗೆ ಸೇರಲು ಅವಕಾಶ ಮಾಡಿಕೊಡಬಾರದು ಎಂದು ಹೇಳಿದೆ.
ಲಂಚ ಪ್ರಕರಣದಲ್ಲಿ ಶಿಕ್ಷೆಗೊಳಗಾದ ರೈಲ್ವೆ ಇನ್ಸ್ಪೆಕ್ಟರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ ನ್ಯಾ. ಸಂದೀಪ್ ಮೆಹ್ತಾ ಮತ್ತು ನ್ಯಾ. ಪ್ರಸನ್ನ ಬಿ ವರಾಲೆ ಅವರಿದ್ದ ಪೀಠವು ಅಂತಹ ಭ್ರಷ್ಟ ಅಧಿಕಾರಿಗಳಿಗೆ ಕರ್ತವ್ಯವನ್ನು ಪುನರಾರಂಭಿಸಲು ಅವಕಾಶ ನೀಡುವುದರಿಂದ ಸಾರ್ವಜನಿಕ ನಂಬಿಕೆಗೆ ಹಾನಿ ಉಂಟಾಗುತ್ತದೆ ಎಂದು ಹೇಳಿದೆ.
“ತಪ್ಪಿತಸ್ಥ ಅಧಿಕಾರಿಯೊಬ್ಬರು ಸೇವೆಯಲ್ಲಿ ಉಳಿಯಲು ಅವಕಾಶ ನೀಡಿದರೆ ಅದು ವ್ಯವಸ್ಥೆಯ ಅಡಿಪಾಯವನ್ನು ದುರ್ಬಲಗೊಳಿಸುತ್ತದೆ. ಇದು ಪ್ರಾಮಾಣಿಕ ಅಧಿಕಾರಿಗಳಿಗೆ ಅವಮಾನ ಮಾಡಿದಂತಾಗುತ್ತದೆ” ಎಂದು ಹೇಳಿದೆ.


ರೈಲ್ವೆ ರಕ್ಷಣಾ ಪಡೆ ಇನ್ಸ್ಪೆಕ್ಟರ್ ತಮ್ಮ ಅರ್ಜಿಯಲ್ಲಿ ಲಂಚ ಪ್ರಕರಣದಲ್ಲಿ ಗುಜರಾತ್ ನ ವಿಚಾರಣಾ ನ್ಯಾಯಾಲಯವು ತನ್ನ ಶಿಕ್ಷೆಯನ್ನು ತಡೆ ಹಿಡಿಯಬೇಕೆಂದು ಕೋರಿದ್ದು ಗುಜರಾತ್ ನ ಹೈಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿ ಇನ್ಸ್ಪೆಕ್ಟರ್ ಗೆ ಜಾಮೀನು ನೀಡಿತ್ತು. ಆದರೆ ಅವರ ಶಿಕ್ಷೆಯನ್ನು ಅಮಾನತುಗೊಳಿಸಲು ನಿರಾಕರಿಸಿತ್ತು.







