ವಿದ್ಯಾರ್ಥಿಗಳು ಕ್ರೀಡೆಯನ್ನು, ಯಶಸ್ಸು ಪಡೆಯುವ ಮೆಟ್ಟಿಲಾಗಿ ಬಳಸಿಕೊಳ್ಳಬೇಕು: ಮಹಾವೀರ ಹೆಗ್ಡೆ

ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳದಲ್ಲಿ ಸತತ ನಾಲ್ಕನೇ ವರ್ಷದ ವಿದ್ಯಾರ್ಥಿಗಳ ಭುವನೇಂದ್ರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪ್ರಂದ್ಯಾಟವು ನೆರವೇರಿತು.
ಪಂದ್ಯಾಟದ ಉದ್ಘಾಟನೆಯನ್ನು ನೆರವೇರಿಸಿದ ಪವರ್ ಪಾಯಿಂಟ್ ಸಂಸ್ಥೆಯ ಮಾಲಕರೂ ಉದ್ದಿಮೆದಾರರೂ ಆದ ಮಹಾವೀರ ಹೆಗ್ಡೆ ಇವರು ಮಾತನಾಡಿ, ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸುವುದು ಕೂಡಾ ಒಂದು ಕಲೆ. ವಿದ್ಯಾರ್ಥಿಗಳು ಅದನ್ನ ಸಂಗ್ರಹಿಸಿ ಇಂತಹ ಕ್ರೀಡಾಕೂಟವನ್ನು
ವೈಭವದಿಂದ ನೆರವೇರಿಸುವುದರಿಂದ ಎಲ್ಲರಲ್ಲೂ ಒಂದು ಉತ್ಸಾಹ ಮೂಡಲು ಕಾರಣವಾಗುತ್ತದೆ. ಜೀವನ ಪ್ರತಿಕ್ಷಣವೂ ಹೋರಾಟವೇ. ಎಲ್ಲ
ಸಮಸ್ಯೆಗಳ ಜೊತೆಗೆ ಒಳ್ಳೆಯದೂ ಇರುತ್ತದೆ. ಸೋಲಿನ ಮೆಟ್ಟಿಲನ್ನು ಹತ್ತಿದಾಗಲೇ ಅದಕ್ಕೆ ಬೆಲೆ. ವಿದ್ಯಾರ್ಥಿಗಳು ಕ್ರೀಡೆಯನ್ನು ಬದುಕಿನಲ್ಲಿ
ಆದರ್ಶವನ್ನಾಗಿ ಇಟ್ಟುಕೊಳ್ಳಬೇಕು. ಯಶಸ್ಸನ್ನು ಪಡೆಯಲು ಇದನ್ನು ಮೆಟ್ಟಿಲಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ, ರೈಟ್ ಟ್ಯಾಕ್ಸ್ ಮೇಟ್ ಸಂಸ್ಥೆಯ ಮಾಲಕರೂ, ಕಾಲೇಜಿನ ಹಳೆ ವಿದ್ಯಾರ್ಥಿಯೂ ಆಗಿರುವ ಸಿ. ಎ. ಹರೀಶ್ ರಾವ್
ಇವರು ಮಾತನಾಡುತ್ತಾ, ಮತ್ತೆ ನನಗೆ ಮನೆಗೆ ಮರಳಿದ ಅನುಭವ ಆಗ್ತಿದೆ. ಭುವನೇಂದ್ರ ಕಾಲೇಜು, ಪಠ್ಯದ ಜೊತೆಗೆ ಕ್ರೀಡೆಗೂ ಹೆಚ್ಚಿನ
ಪ್ರೋತ್ಸಾಹವನ್ನು ಕೊಡುತ್ತಲೇ ಬಂದಿದೆ. ನಾವೆಲ್ಲ ಒಂದು ಸಂಸ್ಥೆಯನ್ನು ನಡೆಸಬೇಕಾದರೆ, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇದು
ಆತ್ಮವಿಶ್ವಾಸದಿಂದ ಮಾತ್ರ ಸಿಗಲು ಸಾಧ್ಯ. ಈ ಕಾಲೇಜು, ಅಂತಹ ಒಂದು ಸಾಧ್ಯತೆಯನ್ನು ನನಗೆ ಕೊಟ್ಟಿದೆ. ಕಲಿಕೆಯ ಜೊತೆಗೆ ಕ್ರೀಡೆಯೂ ನಮ್ಮನ್ನು ಬೆಳೆಸುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಗೆದ್ದವರು ಮಾತ್ರ ವಿನ್ನರ್ ಅಲ್ಲ. ಅದರ ಜೊತೆಗೆ ಸಾಗಿದವರು ಕೂಡಾ ಗೆಲ್ಲುವವರೇ ಎಂದರು.
ಪುರಸಭಾ ಸದಸ್ಯರಾದ ಪ್ರದೀಪ್ ರಾಣೆ ಇವರು ಮಾತನಾಡಿ ಭುವನೇಂದ್ರ ಕಾಲೇಜಿಗೆ ಅದರದ್ದೇ ಆದ ಇತಿಹಾಸವಿದೆ. ಈ ಕಾಲೇಜು ನನಗೆ ಎಲ್ಲವನ್ನೂ
ಕೊಟ್ಟಿದೆ. ಈ ಕಾಲೇಜಿನಲ್ಲಿ ಕಲಿತ ನನಗೆ ಅವಕಾಶಗಳ ಬಾಗಿಲು ತೆರೆಯಲು ಪ್ರಾಚಾರ್ಯರ ಪ್ರೀತಿಯ ಜೊತೆಗೆ ಕ್ರೀಡೆಯೂ ಪ್ರೋತ್ಸಾಹ ಕೊಟ್ಟಿದೆ.
ವಿದ್ಯಾರ್ಥಿಗಳು ಕಲಿಕೆಯ ಜೊತೆ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಬಹಳ ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದಾರೆ ಎನ್ನುವುದು ನಮಗೆಲ್ಲ ಸಂತೋಷ
ತಂದಿದೆ ಎಂದು ಹೇಳಿ ಕ್ರೀಡಾಳುಗಳೆಲ್ಲರಿಗೂ ಶುಭ ಹಾರೈಸಿದರು.
ಕ್ರೀಡಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಎ. ಕೋಟ್ಯಾನ್ ಮಾತನಾಡಿ, ಸ್ಟಡಿ ಬ್ಯಾಟಿಂಗ್
ಕ್ರಮವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ನಿಧಾನಪ್ರಗತಿ ಎನ್ನುವುದು ಗೆಲುವಿನಲ್ಲಿ ಬಹುದೊಡ್ಡ ಪಾಲನ್ನು ಕೊಡುತ್ತದೆ. ನಮ್ಮ ವಿದ್ಯಾರ್ಥಿಗಳೇ
ಇಂದು ವೇದಿಕೆಯಲ್ಲಿ ಅತಿಥಿಗಳಾಗಿ ಇದ್ದಾರೆ ಅಂದರೆ ಅವರೆಲ್ಲರೂ ಭುವನೇಂದ್ರ ಕಾಲೇಜಿನ ಅಂಗಳದಲ್ಲಿ ಆಡಿದವರೇ ಆಗಿದ್ದಾರೆ.ಈ ಪರಂಪರೆ ಸದಾ
ಕಾಲ ಮುಂದುವರಿಯಬೇಕು.ವಿದ್ಯಾರ್ಥಿಗಳ ಪರಿಶ್ರಮದಿಂದ ಇಷ್ಟು ಅದ್ಧೂರಿಯಾಗಿ ಕ್ರಿಕೆಟ್ ಮ್ಯಾಚ್ ನಡೆಯುತ್ತದೆ. ಇದರಲ್ಲಿ ಎಲ್ಲರೂ ಭಾಗವಹಿಸಿ
ಎನ್ನುತ್ತಾ ಕ್ರಿಕೆಟ್ ಪಂದ್ಯಾಟದಲ್ಲಿ ಪಾಲ್ಗೊಳ್ಳುವ ತಂಡಗಳಿಗೆ ಶುಭ ಕೋರಿದರು.
ವೇದಿಕೆಯಲ್ಲಿ, ಪೆರ್ವಾಜೆ ಹೖಸ್ಕೂಲಿನ ಮುಖ್ಯೋಪಾಧ್ಯಾಯರೂ,ದೈಹಿಕ ಶಿಕ್ಷಕಿಯೂ ಆಗಿರುವ ಶ್ರೀಮತಿ ವೇದಾವತಿ, ಐಕ್ಯೂಎಸಿ ಸಂಯೋಜಕರಾದ
ಪ್ರೊ. ಲಕ್ಷ್ಮೀನಾರಾಯಣ,ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಈಶ್ವರ್ ಭಟ್, ಸಹ ಕ್ಷೇಮಪಾಲನಾ ಅಧಿಕಾರಿ ನಂದಕಿಶೋರ್, ಕಾಲೇಜಿನ ದೈಹಿಕ
ಶಿಕ್ಷಣ ನಿರ್ದೇಶಕರಾದ ನವೀನ್ ಚಂದ್ರ ಉಪಸ್ಥಿತರಿದ್ದರು.
ಕು. ಹಿತ ಕಾರ್ಯಕ್ರಮ ನಿರೂಪಿಸಿದರು. ಕೀರ್ತಿ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ಅನನ್ಯ ವಂದಿಸಿದರು.






















































