
ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಲಲಿತ ಕಲಾ ಸಂಘ ಮತ್ತು ಮಾಹೆಯ ಸಾಂಸ್ಕೃತಿಕ ಸಮನ್ವಯ ಸಮಿತಿ ಸ್ಪಿಕ್ ಮೆಕೆ ಇದರ ವತಿಯಿಂದ ಒಡಿಸ್ಸಿ ಶಾಸ್ತ್ರೀಯ ನೃತ್ಯ ಪ್ರದರ್ಶನವು ಭುವನೇಂದ್ರ ಕಾಲೇಜಿನ ಶ್ರೀ ರಾಮಕೃಷ್ಣ ಸಭಾಂಗಣದಲ್ಲಿ ಜರುಗಿತು.
ಒಡಿಸ್ಸಿ ನೃತ್ಯ ಪ್ರದರ್ಶನದ ಉದ್ಘಾಟನೆಯನ್ನು ಅಂತರಾಷ್ಟ್ರೀಯ ಖ್ಯಾತಿಯ ಒಡಿಸ್ಸಿ ನೃತ್ಯ ಕಲಾವಿದರಾದ ಶ್ರೀ ರಾಹುಲ್ ಆಚಾರ್ಯ ಇವರು ನೆರವೇರಿಸಿದರು. ಅವರು ಮಾತನಾಡಿ ಪುರಾತನ ನಾಗರಿಕತೆಯಿಂದಲೂ ನೃತ್ಯಪ್ರಕಾರವು ನಮ್ಮ ಸಂಸ್ಕೃತಿಯ ಭಾಗವಾಗಿದೆ. ನವರಸಗಳನ್ನು ಪ್ರತಿಬಿಂಬಿಸುವ ಆಂಗಿಕ ಅಭಿನಯದ ಒಡಿಸ್ಸಿ ನೃತ್ಯವು ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರವೆಂದೇ ಖ್ಯಾತಿ ಪಡೆದಿದೆ. ಒಡಿಶಾದ ದೇವಾಲಯಗಳಲ್ಲಿ ಪ್ರಸ್ತುತವಾಗಿದ್ದ ಈ ನೃತ್ಯ ಪ್ರಕಾರ ಇವತ್ತು ಜಗತ್ತಿನ ಎಲ್ಲ ಕಡೆಗಳಿಗೂ ಹರಡಿದೆ. ಆಧ್ಯಾತ್ಮದ ನೆಲೆಯಲ್ಲಿ ಈ ನೃತ್ಯಕ್ಕೆ ವಿಶೇಷ ಸ್ಥಾನವಿದೆ. ಹಲವಾರು ಶಕ್ತಿ ಭಂಗಿಗಳನ್ನು ಒಳಗೊಂಡ ಒಡಿಸ್ಸಿ ನೃತ್ಯ, ಕರಾವಳಿಯ ಈ ಭಾಗದಲ್ಲೂ ಪ್ರಸ್ತುತಗೊಳ್ಳುವುದು ನಮ್ಮಂತಹ ಕಲಾವಿದರ ಸೌಭಾಗ್ಯವಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ಕಲಾವಿದರನ್ನು ಅಭಿನಂದಿಸುತ್ತಾ, ಭುವನೇಂದ್ರ ಕಾಲೇಜಿನ ನೆಲದಲ್ಲಿ ನೂರಾರು ಕಲಾವಿದರು ತಮ್ಮ ಹೆಜ್ಜೆಗಳನ್ನು ಇಲ್ಲಿಯ ನೆನಪಲ್ಲಿರಿಸಿ ಹೋದವರಿದ್ದಾರೆ. ಎಲ್ಲ ಕಲಾವಿದರೂ ಹೃದಯದೊಳಗಿನಿಂದ ಕಲೆಯನ್ನು ಆರಾಧಿಸುವವರು. ನಾವೆಲ್ಲರೂ ಕಲೆಗೆ ಮತ್ತು ಕಲಾವಿದರಿಗೆ ಗೌರವ ಕೊಡುವವರು. ಹಾಗಾಗಿ,ನಮ್ಮ ವಿದ್ಯಾರ್ಥಿಗಳಿಗೆ ಒಡಿಸ್ಸಿ ನೃತ್ಯ ಪ್ರಕಾರವೂ ದಕ್ಕಿರುವುದು ಅವರ ಅದೃಷ್ಟ. ವೃತ್ತಿ ಮತ್ತು ಪ್ರವೃತ್ತಿಯನ್ನು ಜೊತೆಗಿಟ್ಟುಕೊಂಡು ಸಾಧಿಸಬಹುದು ಅನ್ನುವುದಕ್ಕೆ ಸಾಕ್ಷಿಯಾಗಿ ಕಲಾವಿದರಾದ ರಾಹುಲ್ ಆಚಾರ್ಯ ಅವರು ನಮ್ಮ ವಿದ್ಯಾರ್ಥಿಗಳ ಕಣ್ಣೆದುರಿದ್ದಾರೆ. ಅವರು ಸದಾ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗುವರು ಎಂದರು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಈಶ್ವರ ಭಟ್, ಐಕ್ಯೂಎಸಿ ಸಂಯೋಜಕರಾದ ಪ್ರೊ. ಲಕ್ಷ್ಮೀ ನಾರಾಯಣ ಕೆ. ಎಸ್., ಲಲಿತಕಲಾ ಸಂಘದ ಸಹ ಸಂಯೋಜಕರಾದ ಶಿವಾನಂದ ನಾಯಕ್ ಉಪಸ್ಥಿತರಿದ್ದರು.
ಲಲಿತಕಲಾ ಸಂಘದ ಸಂಯೋಜಕರಾದ ಪ್ರೊ. ನಂದಕಿಶೋರ್ ಕೆ. ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಅಂತಿಮ ಬಿ. ಕಾಂ. ನ ವಿದ್ಯಾರ್ಥಿನಿಯರಾದ ಕು. ಪೂರ್ವಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ಕೋಟ್ಯಾನ್ ಸ್ವಾಗತಿಸಿದರು. ಅನನ್ಯ ಮಾಧವ್ ಧನ್ಯವಾದ ಸಮರ್ಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ರಾಹುಲ್ ಆಚಾರ್ಯ ಇವರಿಂದ ಸುದೀರ್ಘ ಕಾಲದವರೆಗೆ ಒಡಿಸ್ಸಿ ಶಾಸ್ತ್ರೀಯ ನೃತ್ಯ ಪ್ರದರ್ಶನ ನಡೆಯಿತು.
ಗಾಯನದಲ್ಲಿ ಸುಕಾಂತ ಕುಮಾರ್ ಕುಂಡು, ವಯಲಿನ್ ನಲ್ಲಿ ಪ್ರದೀಪ್ ಕುಮಾರ್ ಮಹಾರಾಣಾ, ತಾಳದಲ್ಲಿ ಸುಮುಖ ತಮಂಕರ್ ಮೃದಂಗದಲ್ಲಿ ದಿಬಾಕರ್ ಪರೀದಾ ಸಹಕರಿಸಿದರು.





