
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ,ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಸಾಹಿತ್ಯ ಸಂಘ ಕಾರ್ಕಳ ಇವರ ಸಹಯೋಗದಲ್ಲಿ ಕನ್ನಡ ಭಾಷಾ ವೈವಿಧ್ಯತಾ ಗೋಷ್ಠಿಯ ಕುಂದಾಪ್ರ ಭಾಷೆ ಅರೆ ಭಾಸೆ ಹವ್ಯಕ ಭಾಷೆ ತ್ರಿವಳಿ ಭಾಷಾ ಮಾತು ಗಮ್ಮತ್ತು ಕಾರ್ಕಳದ ಹೋಟೆಲ್ ಪ್ರಕಾಶ್ ಸಂಭ್ರಮ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಕಳ ರಂಗ ಸಂಸ್ಕೃತಿ ಅಧ್ಯಕ್ಷ ನಿತ್ಯಾನಂದ ಪೈ ಅವರು ನೆರವೇರಿಸಿ ಪ್ರತಿಯೊಂದು ಭಾಷೆಯು ಅದರದ್ದೇ ಆದ ಸತ್ವವನ್ನೂ ತತ್ವವನ್ನೂ ಹೊಂದಿದೆ. ಭಾಷೆಯು ಬದುಕಿನ ಒಂದು ಸಂಭ್ರಮ. ಭಾವನೆಗಳ ಸಂಬಂಧಗಳನ್ನು ಒಂದಾಗಿಸಲು ಭಾಷೆ ಸಹಕಾರಿಯಾಗಿದೆ ಎಂದರು. ಆಶಯ ನುಡಿಯನ್ನಾಡಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಒಂದು ಭಾಷೆಯ ಸಂರಚನೆಯು ವ್ಯಾಕರಣ ಬದ್ಧವಾಗಿ ಭಾವ ಶುದ್ಧಿಯಾಗಿ ತನ್ನತನವನ್ನು ಉಳಿಸಿಕೊಂಡಿರುತ್ತದೆ. ಆದರೆ ಆಡು ಮಾತಿನಲ್ಲಿ ಬಹಳ ರಂಜನೀಯವಾಗಿ ಮತ್ತಷ್ಟು ಬಾಂಧವ್ಯದ ಬೆಸುಗೆಯ ಕೊಂಡಿಯಾಗಬಲ್ಲದು ಎಂದು ಹೇಳಿ ಶುಭ ಹಾರೈಸಿದರು.
ಬಳಿಕ ಕುಂದಾಪ್ರ ಭಾಷೆ ಅರೆಬಾಷೆ ಹವ್ಯಕ ಭಾಷೆಗಳ ಕುರಿತಂತೆ ಸಾಹಿತಿ ಹಿರಿಯ ಪತ್ರಕರ್ತ ಸಿದ್ಧಾಪುರ ವಾಸುದೇವ ಭಟ್ಟ ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯ ಅರೆಭಾಷೆ ಅಧ್ಯಯನಕಾರ ಡಾ ಪುರುಷೋತ್ತಮ ಕಾರ್ಕಳ ತಾಲೂಕು ಹವ್ಯಕ ಸಭಾ ಕೋಶಾಧಿಕಾರಿ ಸಂಸ್ಕೃತಿ ಚಿಂತಕ ಗಣಪ್ಪಯ್ಯ ಇವರು ಒಂದು ಪ್ರಾದೇಶಿಕ ಭಾಷೆಯ ಸೊಗಡು ಆ ಭಾಷೆಯ ಮೂಲಕ ಕಟ್ಟಿಕೊಂಡ ಬದುಕಿನ ಕ್ರಮವೋಗಿದೆ. ಪಂಚ ದ್ರಾವಿಡ ಭಾಷೆಗಳೊಂದಿಗಿನ ಕೊಡುಕೊಳ್ಳುವಿಕೆಯ ಮೂಲಕ ಮತ್ತೊಂದು ಉಪಭಾಷೆಯು ಹುಟ್ಟಿಕೊಂಡು ಅದು ಒಂದು ಸಮುದಾಯ ಭಾಷೆಯಾಗಿ ಪಡೆದು ಕೊಳ್ಳುವ ವ್ಯಾಪಕತೆಯ ಬಗ್ಗೆ ತಿಳಿಸಿದರು.ತಮ್ಮ ತಮ್ಮ ಉಪಭಾಷೆ ಮನೆಯೊಳಗೆ ಮತ್ತು ಹೊರಗಿನ ನಿತ್ಯ ವ್ಯವಾಹಾರಿಕ ಬದುಕಿನಲ್ಲಿ ಹೇಗೆಲ್ಲಾ ಪ್ರಯೋಗವಾಗುವುದು ಮತ್ತು ಭಾಷೆಯ ಆಕೃತಿ ಧ್ವನಿಮಾದ ಬಗ್ಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದ ಕಾರ್ಕಳ ಕಸಾಪ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿಯವರು ನಮ್ಮ ನಡುವೆ ಸಾವಿರಾರು ಭಾಷೆಗಳಿವೆ ಪ್ರತೀ ಒಂದು ಭಾಷೆಯೂ ಅದರದ್ದೇ ಆದ ಮಾನ ಅಭಿಮಾನವನ್ನು ಹೊಂದಿದೆ. ಪ್ರತಿಯೊಂದು ಭಾಷೆಯಲ್ಲಿಯೂ ಜನರ ಭಾವನೆಗಳ ಮಿಡಿತವು ಮಿಳಿತವಾಗಿರುತ್ತದೆ. ಆದರೆ ಇವೆಲ್ಲವೂ ಕನ್ನಡ ಭಾಷೆಯ ಒಡಲ ಕಡಲಿನ ಮುತ್ತು ರತ್ನಗಳು ಎಂದು ಹೇಳಿದರು. ಪ್ರಾದೇಶಿಕ ಭಾಷೆಯು ನಾಡಿನ ಮಾತೃಭಾಷೆಯ ಸೆಲೆಗಳಾಗಿವೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ ಪದ್ಮನಾಭ ಗೌಡ ಉಪಸ್ಥಿತರಿದ್ದು ಶುಭ ಹಾರೈಸಿದರು ಕಾರ್ಕಳ ತಾಲೂಕು ಒಕ್ಕಲಿಗ ಯಾನೆ ಗೌಡರ ಸೇವಾ ಸಂಘ ಕಾರ್ಕಳ ಅಧ್ಯಕ್ಷ ವಸಂತ ಸೇನ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಪ್ರಾಸ್ತಾವಿಸಿ, ಸ್ವಾಗತಿಸಿದರು ಕಸಾಪ ಸಂಘಟನಾ ಕಾರ್ಯದರ್ಶಿ ಗಣೇಶ್ ಜಾಲ್ಸೂರು ನಿರೂಪಿಸಿ ಕಸಾಪ ಸದಸ್ಯೆ ಸುಲೋಚನಾ ವಂದಿಸಿದರು ಶಾರ್ವರಿ ಶಾನುಭೋಗ ಪ್ರಾರ್ಥಿಸಿದರು. ಶಿವಸುಬ್ರಹ್ಮಣ್ಯ ಭಟ್ ಸಹಕರಿಸಿದರು.





