79ನೇ ಸ್ವಾತಂತ್ರ್ಯೋತ್ಸವ, ಹಕ್ಕುಗಳನ್ನು ಬೇಡುವಷ್ಟೇ ಹೊಣೆಗಾರಿಕೆಯನ್ನು ನಿಭಾಯಿಸಬೇಕಾದ ಸಮಯ
ಶೈಲೇಶ್ ಶೆಟ್ಟಿ, ಬೈಲೂರ್

ಸ್ವಾತಂತ್ರ್ಯವೆಂಬುದು ಕೇವಲ ವಿದೇಶಿ ಆಳ್ವಿಕೆಯಿಂದ ಮುಕ್ತಿಯಾಗುವುದಲ್ಲ; ಅದು ನಮ್ಮ ಮನಸ್ಸು, ನಡೆ-ನುಡಿ, ಆಚಾರ-ವಿಚಾರಗಳಲ್ಲಿ ದೇಶಪ್ರೇಮದ ಬೆಳಕನ್ನು ಹೊತ್ತಿಸುವುದು. 79ನೇ ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿರುವ ನಾವು, ಹಕ್ಕುಗಳನ್ನು ಬೇಡುವಷ್ಟೇ ಹೊಣೆಗಾರಿಕೆಗಳನ್ನು ನಿಭಾಯಿಸಬೇಕಾದ ಸಮಯದಲ್ಲಿ ನಿಂತಿದ್ದೇವೆ.
ದೇಶಪ್ರೇಮವನ್ನು ವ್ಯಕ್ತಪಡಿಸಲು ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬ ಮಾತಿಗೆ ಸಮನಾದುದು ಬೇರೆಡೆ ಸಿಗುವುದು ದುರ್ಲಭ. ಭಾರತವೆಂಬುದು ಕೇವಲ ರಾಜಕೀಯ ಭೂಪಟವಲ್ಲ ಭೌಗೋಳಿಕ ಪ್ರದೇಶವಲ್ಲ ಬದಲಿಗೆ ಅದು ನಮ್ಮ ತಾಯಿ, ನಮ್ಮ ಶಕ್ತಿ, ನಮ್ಮ ಆತ್ಮ, ನಮ್ಮ ಸರ್ವಸ್ವ. ನಮ್ಮ ರಾಷ್ಟ್ರಧ್ವಜ ಗಾಳಿಯಲ್ಲಿ ಹಾರಾಡುವಾಗ ನಾವಿಂದು ಉಸಿರಾಡುತ್ತಿರುವ ಸ್ವಾತಂತ್ರ್ಯ ಸಾವಿರಾರು ಹೃದಯಗಳ ತ್ಯಾಗ, ಲಕ್ಷಾಂತರ ಜನರ ಹೋರಾಟ, ಅನೇಕ ಕುಟುಂಬಗಳ ಕಣ್ಣೀರು ಮತ್ತು ರಕ್ತದ ಫಲ ಎಂದೆನಿಸುತ್ತದೆ.
ಸ್ವಾತಂತ್ರ್ಯವೆಂಬುದು ಕಾಲ, ದೇಶ, ಸಮಾಜವನ್ನು ಅನುಸರಿಸಿ ಭಿನ್ನವಾಗಿರುತ್ತದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಅಮೇರಿಕಾದಲ್ಲಿ ಹಾಗೆ ಮಾಡಬಹುದು ಭಾರತದಲ್ಲಿ ಏಕೆ ಮಾಡಬಾರದು ಎಂದು ಪ್ರಶ್ನಿಸಲಾಗದು ಏಕೆಂದರೆ ಪ್ರತಿಯೊಂದು ಸಮಾಜದ ಆಚಾರ ವಿಚಾರಗಳು ಅಲ್ಲಿನ ಸಾವಿರಾರು ವರ್ಷದ ಸಂಪ್ರದಾಯ, ನಂಬಿಕೆ, ಧರ್ಮ ಇತ್ಯಾದಿಗಳಿಂದ ರೂಪಗೊಂಡಿರುತ್ತದೆ. ನಿಜವಾದ ಸ್ವಾತಂತ್ರ್ಯ ನಮ್ಮ ಇಂದಿನ ಅಜ್ಞಾನ, ಅಸಮಾನತೆ, ಬಡತನ ಮತ್ತು ಭ್ರಷ್ಟಾಚಾರದಿಂದ ಮುಕ್ತವಾಗುವುದು ಹೌದು. ಮಾನವನ ಅತಿ ಶ್ರೇಷ್ಠ ಅನ್ವೇಷಣೆಯಾದ ಪ್ರಜಾಪ್ರಭುತ್ವ ಎಲ್ಲೆಲ್ಲೂ ವ್ಯಾಪಿಸಿರುವ ಇಂದಿನ ಕಾಲದಲ್ಲಿ ಮಾಡು ಇಲ್ಲವೇ ಮಡಿ ಎಂಬಂತಹ ಸಂದರ್ಭಗಳು ವ್ಯಕ್ತಿಗಳಿಗೆ ಎದುರಾಗುವಂತೆ ದೇಶಗಳಿಗೂ ಎದುರಾಗುತ್ತದೆ ಇತ್ತೀಚಿನ ವಿದ್ಯಾಮಾನಗಳನ್ನು, ಬೆಳವಣಿಗೆಗಳನ್ನು ಗಮನಿಸಿದರೆ ಭಾರತ ಮಾಡು ಇಲ್ಲವೇ ಮಡಿ ನಿರ್ಧಾರ ಕೈಗೊಳ್ಳುವ ಅನಿವಾರ್ಯತೆಯಲ್ಲಿದೆ. ರಾಷ್ಟ್ರವನ್ನು ಪೀಡಿಸುವ ಯಾವುದೇ ಸಮಸ್ಯೆಯ ಬಗ್ಗೆ ಏಕರೂಪದ ತೀರ್ಮಾನಗಳನ್ನು ಕೈಗೊಳ್ಳುವುದರಲ್ಲಿ ರಾಷ್ಟ್ರ ಮತ್ತೆ ಮತ್ತೆ ವಿಫಲವಾಗುತ್ತಿದೆ. ಪರಿಣಾಮವಾಗಿ ನಾವು ತೆರಬೇಕಾಗಿರುವ ಬೆಲೆಯೂ ಮುಂದೆ ಅಧಿಕವಾಗಲಿದೆ. ವೈವಿಧ್ಯತೆಯಲ್ಲಿ ಎಲ್ಲಾ ವೈಶಿಷ್ಟ್ಯಗಳನ್ನು ತುಂಬಿಕೊಂಡಿರುವ ಭಾರತದಂತಹ ದೇಶದಲ್ಲಿ ಪ್ರತಿ ಹೆಜ್ಜೆಗೂ ವಿಭಿನ್ನ ಅಭಿಪ್ರಾಯಗಳು ಎದುರಾಗುವುದು ಸಹಜ ಇದು ತಪ್ಪೇನಲ್ಲ ಆದರೆ ದೇಶ ರಕ್ಷಣೆಯ ಕಾನೂನಿನಲ್ಲಿ ಈ ವಿರೋಧವೇಕೆ? ಭಾರತದಲ್ಲಿ ರಾಷ್ಟ್ರೀಯ ಮನೋಭಾವ, ದೇಶಾಭಿಮಾನ, ಶ್ರೇಷ್ಠ ಪರಂಪರೆಯ ಬಗ್ಗೆ ಹೆಮ್ಮೆ ಬರಬಾರದೆಂಬ ಪಿತೂರಿಗಳು ಹಿಂದಿನಿಂದಲೂ ಎಗ್ಗಿಲ್ಲದೆ ಸಾಗುತ್ತಿದೆ. ಯುವಜನತೆಯಲ್ಲಿ ದೇಶಪ್ರೇಮದ ಕಿಚ್ಚು ಕ್ಷೀಣಿಸುತ್ತಿದ್ದು ನನಗೆ ಅನ್ಯಾಯವಾದರೆ ಮಾತ್ರ ಧ್ವನಿಯೆತ್ತಬೇಕು ಎಂಬುದು ಇಂದಿನ ಪರಿಕಲ್ಪನೆ. ಬ್ರಿಟಿಷರ ದಾಸ್ಯ ಸಂಕೋಲೆ ಕಳಚಿ ಶತಮಾನಗಳೇ ಕಳೆದರು ನಮ್ಮ ನಡೆ-ನುಡಿ, ಆಹಾರ-ವಿಹಾರ, ಆಚಾರ-ವಿಚಾರ ಪರಕಿಯರನ್ನೇ ಅನುಸರಣೆ ಮಾಡುತ್ತಿದ್ದು ದೇಶಪ್ರೇಮದ ಹಿರಿಮೆಯ ಪ್ರಸರಣಕ್ಕೆ ಅಡ್ಡಿಯಾಗುತ್ತಿದೆ. ಭಾರತೀಯರಲ್ಲಿ ವಸಾಹತು ಮನಸ್ಥಿತಿ ಜನ್ಮ-ಜಾತ, ರಕ್ತಗತ ಎಂಬಷ್ಟು ಬೇರೂರಿ ಬಿಟ್ಟಿದೆ. ಶಿಕ್ಷಣ ಪದ್ಧತಿಯಲ್ಲಂತೂ ಸ್ವಾತಂತ್ರ್ಯದ ಎಲ್ಲಾ ದಾರೆ-ಮಜಲುಗಳನ್ನು ಭೋದಿಸದೆ ಇಂಗ್ಲೀಷ್ ಹೆಚ್ಚುಗಾರಿಕೆಯನ್ನೇ ಒಪ್ಪಿಕೊಂಡು ಅಕಾಡೆಮಿಕ್ ವಲಯ ರಾಡಿಯೆದ್ದು ಹೋಗಿದೆ. ಸ್ವಾತಂತ್ರ್ಯೋತ್ಸವ ಬರಿಯ ಸಂಭ್ರಮಕ್ಕಷ್ಟೇ ಅಲ್ಲದೆ ನಮ್ಮ ನೈಜ್ಯ ದೇಶಪ್ರೇಮವನ್ನು ಬಡಿದೆಬ್ಬಿಸಬೇಕು. ಯುವಜನತೆಯ ನಡುವೆ ಬಿರುಕು ಮೂಡಿಸುವಂತಹ ಅಪಪ್ರಚಾರಗಳು, ದೇಶ ರಕ್ಷಣೆಯ ಕಾನೂನಿನ ವಿರೋಧ, ಈ ದೇಶದಲ್ಲಿ ಬದುಕಲು ಭಯವಾಗುತ್ತದೆ ಎಂಬ ಸೆಲೆಬ್ರೇಟಿಗಳ ಹೇಳಿಕೆಗಳು, ವಿದ್ಯಾವಂತರು ಬುದ್ಧಿಜೀವಿಗಳು ಎನಿಸಿಕೊಂಡಿರುವವರ ದೇಶ ವಿರೋಧಿ ಕುಕೃತ್ಯಗಳು ಇವೆಲ್ಲ ಬೆಳವಣಿಗೆ ಅಪಾಯಕಾರಿಯಾಗಿ ಗೋಚರಿಸಿವೆ. ಇಂದಿನ ಪ್ರಜಾಪ್ರಭುತ್ವದಲ್ಲಿ ಯಾವುದು ದೇಶದ್ರೋಹವಲ್ಲ ಪ್ರತ್ಯೇಕವಾದದ ಪ್ರತಿಪಾದನೆ, ವಿರೋಧಿ ರಾಷ್ಟ್ರದ ಪರ ಘೋಷಣೆ ಇವೆಲ್ಲವೂ ಅಭಿವ್ಯಕ್ತಿ ಸ್ವಾತಂತ್ರ್ಯ. ಇವರಿಗೆ ಬೆಂಬಲವಾಗಿ ವೈಯಕ್ತಿಕ ಅಭಿಪ್ರಾಯಗಳಿಗೆ ಮನ್ನಣೆ ಸಿಗಲಿ ಎಂಬ ನರಸತ್ತ ಚಿಂತನೆಗಳು. ದೇಶದೊಳಗಿದ್ದುಕೊಂಡೇ ದೇಶದ ವಿರುದ್ಧ ಷಡ್ಯಂತ್ರ ರೂಪಿಸುವ ಕ್ರಿಮಿಗಳು ನಿಜವಾಗಿಯೂ ಬಾಹ್ಯ ವೈರಿಗಳಿಗಿಂತ ಹೆಚ್ಚು ಅಪಾಯಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಟೀಕಿಸಬಹುದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಬಹುದು ಆದರೆ ದೇಶ ವಿರೋಧಿ ಹೇಳಿಕೆಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಸಹಿಸಲಾಗದು. ದೇಶಪ್ರೇಮದ ವಿಷಯದಲ್ಲಿ ಧರ್ಮ, ಜಾತಿ, ಭಾಷೆ ಇತ್ಯಾದಿಗಳು ಅಡ್ಡ ಬರಬಾರದು. ದೇಶದ ವಿರುದ್ಧ ಕತ್ತಿ ಮಸೆಯುವವರು ಯಾರೇ ಆಗಲಿ ಅವರು ದೇಶದ್ರೋಹಿಗಳೇ. ಕಾನೂನು ಬದ್ಧವಾಗಿ ಸರಕಾರವನ್ನು ಧಿಕ್ಕರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯವಾಗಬಹುದು. ದೇಶವನ್ನೇ ಧಿಕ್ಕರಿಸುವುದು ದೇಶದ್ರೋಹವಾಗುತ್ತದೆ. ದೇಶದ್ರೋಹದ ಕಾನೂನು ಎಲ್ಲಾ ಸಮಾಜಗಳಲ್ಲಿಯೂ ಎಲ್ಲಾ ಕಾಲದಲ್ಲಿಯೂ ಇದೆ ಇದನ್ನು ಇಂಥವರ ವಿರುದ್ಧ ಕಟ್ಟುನಿಟ್ಟಾಗಿ ಬಳಸಬೇಕಷ್ಟೆ. ಯುವಜನತೆಯಲ್ಲಿ ದೇಶಪ್ರೇಮದ ಜ್ಯೋತಿ ಜೀವಂತವಾಗಲಿ ಸ್ವಾತಂತ್ರ್ಯದ ಹೊತ್ತಾರೆಯಲ್ಲಿ ದೇಶಪ್ರೇಮದ ನವ ಚಿಂತನೆ ಮೊಳಗಲಿ ಎಂಬುದೇ ಆಶಯ.