
ನವದೆಹಲಿ: ಭಾರತ–ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಸ್ವಾಗತಿಸಿದ್ದು, ಇದು ದ್ವಿಪಕ್ಷೀಯ ಸಂಬಂಧಗಳಿಗೆ ಮಹತ್ವದ ಉತ್ತೇಜನ ನೀಡಲಿದೆ ಎಂದು ಹೇಳಿದ್ದಾರೆ. ಈ ಒಪ್ಪಂದದಿಂದ ಭಾರತದ ಕಾರ್ಮಿಕರು, ರೈತರು ಹಾಗೂ ಉದ್ಯಮ ವಲಯಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟಿನ ಬಗ್ಗೆ ಎರಡೂ ದೇಶಗಳು ಪರಸ್ಪರ ಒಪ್ಪಿಗೆಯನ್ನು ವ್ಯಕ್ತಪಡಿಸಿದ್ದು, ನವದೆಹಲಿ ಮತ್ತು ವಾಷಿಂಗ್ಟನ್ ನಡುವಿನ ಬಲವಾದ ಸಂಬಂಧಗಳಿಗೆ ನೀಡಿರುವ ವೈಯುಕ್ತಿಕ ಬದ್ಧತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ಮೋದಿ ಧನ್ಯವಾದ ಸಲ್ಲಿಸಿದ್ದಾರೆ.
ಈ ಒಪ್ಪಂದವನ್ನು ಶುಕ್ರವಾರ ಘೋಷಿಸಿದ ಕೆಲವೇ ಗಂಟೆಗಳೊಳಗೆ ಪ್ರಧಾನಿ ಅವರ ಪ್ರತಿಕ್ರಿಯೆ ಹೊರಬಂದಿದ್ದು ‘ತಿಂಗಳುಗಳ ಕಾಲ ನಡೆದ ನಿರಂತರ ಮಾತುಕತೆಗಳು ಹಾಗೂ ಸಂಯುಕ್ತ ಪ್ರಯತ್ನಗಳ ಫಲವಾಗಿ ಈ ಪ್ರಗತಿ ಸಾಧ್ಯವಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಈ ಒಪ್ಪಂದವು ಭಾರತ–ಅಮೆರಿಕ ಪಾಲುದಾರಿಕೆಯ ಆಳ ಮತ್ತು ಭವಿಷ್ಯವನ್ನು ಪ್ರತಿಬಿಂಬಿಸುತ್ತಿದ್ದು ಇದರಿಂದ ರೈತರು, ಉದ್ಯಮಿಗಳು, MSMEಗಳು ಮತ್ತು ನವೋದ್ಯಮಗಳಿಗೆ ಹೊಸ ಅವಕಾಶಗಳು ದೊರಕಲಿದೆ. ‘ಮೇಕ್ ಇನ್ ಇಂಡಿಯಾ’ಗೆ ಮತ್ತಷ್ಟು ಬಲ ಸಿಗಲಿದೆ. ಜೊತೆಗೆ, ಎರಡೂ ದೇಶಗಳಲ್ಲಿ ಉದ್ಯೋಗ ಸೃಷ್ಟಿಗೂ ಇದು ಸಹಕಾರಿಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.



















