
ಹೊಸದಿಲ್ಲಿ: ಶುಕ್ರವಾರ ಕೇಂದ್ರ ಸರಕಾರವು ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಯೆಮೆನ್ ಪ್ರಜೆಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದು ಇದೀಗ ಗಲ್ಲು ಶಿಕ್ಷೆಯನ್ನು ಯೆಮೆನ್ ನಲ್ಲಿ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಕೇಂದ್ರ ಸರಕಾರದ ಪರ ನ್ಯಾಯಾಲಯದಲ್ಲಿ ಹಾಜರಿದ್ದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, “ಈ ವಿಷಯದ ಕುರಿತು ಸರಕಾರದ ಪ್ರಯತ್ನಗಳು ಮುಂದುವರಿದಿವೆ. ಸರಕಾರ ನಿಮಿಷಾ ಪ್ರಿಯಾ ಸುರಕ್ಷಿತವಾಗಿ ದೇಶಕ್ಕೆ ಮರಳುವುದನ್ನು ಬಯಸುತ್ತಿದೆ” ಎಂದು ನ್ಯಾ. ವಿಕ್ರಮ್ ನಾಥ್ ಹಾಗೂ ನ್ಯಾ. ಸಂದೀಪ್ ಮೆಹ್ತಾರನ್ನೊಳಗೊಂಡಿದ್ದ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ಮೊದಲು ನನ್ನ ಕಕ್ಷಿದಾರರಿಗೆ ಕ್ಷಮಾದಾನ ದೊರೆಯಬೇಕು. ಬಳಿಕವಷ್ಟೇ ಪರಿಹಾರ ಮೊತ್ತದ ವಿಷಯ ಮುನ್ನೆಲೆಗೆ ಬರುತ್ತದೆ ಎಂದು ಅರ್ಜಿದಾರರ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರು ತಿಳಿಸಿದರು. ನಿಮಿಷಾ ಪ್ರಿಯಾರ ಗಲ್ಲು ಶಿಕ್ಷೆಯನ್ನು ಮುಂದೂಡಲಾಗಿದೆ ಎಂದು ಅವರು ಇದೇ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು ಆಗಸ್ಟ್ 14ಕ್ಕೆ ಮುಂದೂಡಿದೆ.