ಸರ್ಕಾರ ಕೆಡಹುವ ಭ್ರಮೆಯಿಂದ ಸುನೀಲ್ ಕುಮಾರ್ ಹೊರಬರಲಿ: ಪ್ರದೀಪ್ ಬೇಲಾಡಿ

ಬಿಹಾರ ಚುನಾವಣೆ ಫಲಿತಾಂಶವನ್ನು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದದ ಗೆಲುವು ಎನ್ನುವ ಭ್ರಮೆಗೆ ಸುನೀಲ್ ಕುಮಾರ್ ಒಳಗಾದಂತಿದೆ, ಬಿಹಾರದಲ್ಲಿ ಮಳೆ ಬಂದರೆ ಸುನೀಲ್ ಕುಮಾರ್ ಕೊಡೆ ಅರಳಿಸುತ್ತಿರುವುದು ಹಾಸ್ಯಾಸ್ಪದ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಲೇವಡಿ ಮಾಡಿದ್ದಾರೆ.
ಬಿಹಾರದ ಚುನಾವಣೆಯ ಫಲಿತಾಂಶದ ಬಳಿಕ ಸುನೀಲ್ ಕುಮಾರ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಹೇಳಿಕೆಗಳನ್ನು ನೀಡಿರುವುದು ಅವರ ಬಾಲಿಶತನದ ವರ್ತನೆಯಾಗಿದೆ. ಬಿಹಾರ ಚುನಾವಣೆಗೆ ರಾಜ್ಯ ಸರ್ಕಾರ ಹಣ ನೀಡಿದೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ, ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇರುವಾಗ, ಐಟಿ ಈಡಿ ಎಲ್ಲವೂ ನಿಮ್ಮದೇ ಸರ್ಕಾರದ ಅಧೀನದಲ್ಲಿ ಇರುವಾಗ ವ್ಯರ್ಥ ಆರೋಪ ಮಾಡದೆ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳಿಂದ ತನಿಖೆ ಮಾಡಿಸಿ ಎಂದು ಸವಾಲು ಎಸೆದಿದ್ದಾರೆ.
ಕಾರ್ಕಳದಲ್ಲಿ ನಾಲ್ಕು ಅವಧಿಗೆ ಶಾಸಕರಾಗಿರುವ ಸುನೀಲ್ ಕುಮಾರ್ ಅವರು ಕಂಚಿನ ಪ್ರತಿಮೆ ಎಂದು ನಕಲಿ ಪರಶುರಾಮ ಪ್ರತಿಮೆ ನಿರ್ಮಿಸಿ ಜನತೆಗೆ ಮತ್ತು ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಸುನೀಲ್ ಕುಮಾರ್ ಅವರ ಈ ಮಹಾಮೋಸದಿಂದ ಕಾರ್ಕಳದ ಜನತೆ ರೋಸಿ ಹೋಗಿದ್ದು ನಕಲಿ ಪರಶುರಾಮ ಪ್ರತಿಮೆ ಮಾತ್ರವಲ್ಲದೆ ಎಣ್ಣೆ ಹೊಳೆ ಅಣೆಕಟ್ಟು ಯೋಜನೆಯಲ್ಲಿಯೂ ಭ್ರಷ್ಟಾಚಾರ ನಡೆದಿದೆ ಎಂದು ಜನ ಆರೋಪ ಮಾಡುತ್ತಿದ್ದಾರೆ.
ರಾಜ್ಯದಲ್ಲಿ 136 ಸೀಟುಗಳ ಭರ್ಜರಿ ಬಹುಮತದಿಂದ ಗೆದ್ದಿರುವ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಹಗರಣ, ಭ್ರಷ್ಟಾಚಾರದಲ್ಲಿಯೇ ಮುಳುಗಿರುವ ಸುನೀಲ್ ಕುಮಾರ್ ವಿರುದ್ದ ಸ್ವತಃ ಬಿಜೆಪಿಯಲ್ಲಿಯೇ ಅಪಸ್ವರಗಳು ಕೇಳಿ ಬರುತ್ತಿದ್ದು ಮುಂದಿನ ಬಿಜೆಪಿ ಟಿಕೆಟ್ ಸಿಗುವುದೋ ಇಲ್ಲವೋ ಎನ್ನುವ ಆತಂಕದಲ್ಲಿರುವ ಸುನೀಲ್ ಕುಮಾರ್ ಪರಿಸ್ಥಿತಿಯೇ ಅಸಲಿಯಾಗಿ ಅಯ್ಯೋ ಎನ್ನುವಂತಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಪ್ರತಿಕ್ರಿಯೆ ನೀಡಿದ್ದಾರೆ.






