
ಶಿಲ್ಲಾಂಗ್: ಇಂದೋರ್ ಮೂಲದ ರಾಜಾ ರಘುವಂಶಿ ಕೊಲೆ ಪ್ರಕರಣ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದ್ದು ಮೇಘಾಲಯಕ್ಕೆ ಹನಿಮೂನ್‌ಗೆ ತೆರಳಿದ್ದಾಗ ಪತಿಯನ್ನು ಹತ್ಯೆಗೈದು ಪೊಲೀಸರ ಅತಿಥಿ ಆಗಿರುವ ಸೋನಮ್‌ನ ಸಂಚುಗಳು ತನಿಖೆ ವೇಳೆ ಒಂದೊಂದೆ ಬಯಲಾಗುತ್ತಿವೆ. ಹಂತಕರು ಬೇರೊಂದು ಮಹಿಳೆಯನ್ನು ಕೊಂದು ಸೋನಮ್ ಶವವೆಂದು ನಂಬಿಸಲು ಮುಂದಾಗಿದ್ದರು ಎಂಬ ಆಘಾತಕಾರಿ ವಿಚಾರ ಬಯಲಾಗಿದೆ.
ಮೇಘಾಲಯ ಪೊಲೀಸರು ಜೂ.11 ರಂದು ಸೋನಮ್ ಹಾಗೂ ಇನ್ನುಳಿದ ಆರೋಪಿಗಳನ್ನು ಶಿಲ್ಲಾಂಗ್ ಕೋರ್ಟ್‌ಗೆ ಹಾಜರುಪಡಿಸಿದ್ದು ಈ ವೇಳೆ ಕೋರ್ಟ್ ಐದು ಆರೋಪಿಗಳನ್ನು 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು. ಪೊಲೀಸರ ತನಿಖೆ ವೇಳೆ, ಸೊಹ್ರಾದಲ್ಲಿನ ಜಲಪಾತವನ್ನು ನೋಡಲು ಶಿಖರವನ್ನು ಹತ್ತಿಕೊಂಡು ಹೋಗುವಾಗ ನಿರ್ಜನ ಪ್ರದೇಶದಲ್ಲಿ ಹಂತಕರು ರಾಜಾ ರಘುವಂಶಿಯ ಕೊಲೆ ಮಾಡಿ ಆತನ ಮೃತದೇಹವನ್ನು ಕಮರಿಗೆ ಎಸೆದಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಅದಾದ ನಂತರ ಇನ್ನೊಬ್ಬ ಮಹಿಳೆಯನ್ನು ಕೊಂದು ಶವವನ್ನು ಸುಟ್ಟು, ಆಕೆಯನ್ನೇ ಸೋನಮ್ ಎಂದು ನಂಬಿಸಬೇಕೆಂದು ಪ್ಲಾನ್ ಮಾಡಿದ್ದರು. ಸತ್ಯ ಬಯಲಾಗುವವರೆಗೂ ಸೋನಮ್‌ನ್ನು ಎಲ್ಲಿಯಾದರೂ ಅಡಗಿಸಿಡುವ ಯೋಜನೆ ಹಾಕಿಕೊಂಡಿದ್ದರು ಎಂಬ ಕರಾಳ ಸತ್ಯ ಬಯಲಾಗಿದೆ.



















