
ಬೆಳ್ಮಣ್ಣು: ಸೆ. 20- ದಹಿಸರ್ ಚೆಕ್ನಾಕಾದ ಹೊಟೇಲ್ ‘ಚಿರಂಜೀವಿ’ಯ ಮಾಲಕ, ಕಾರ್ಕಳ ಕಲ್ಯಾ ಗುರ್ಮೆದಬೈಲು ದಿ. ಎಲ್ಲಪ್ಪ ಶೆಟ್ಟಿಯವರ ಪುತ್ರ ಸುರೇಶ್ ಶೆಟ್ಟಿ (65)ಯವರು ಸೆಪ್ಟೆಂಬರ್19 ರ ಶುಕ್ರವಾರದಂದು ಬೆಳ್ಮಣ್ಣುವಿನ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಇವರು ಬೆಳ್ಮಣ್ಣು ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ಯುವಕ ಮಂಡಲದ ಗೌರವಾಧ್ಯಕ್ಷರು, ದಹಿಸರ್ ವೈಶಾಲಿ ನಗರ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿ ಇದರ ಅಧ್ಯಕ್ಷರು ಶ್ರೀ ದುರ್ಗಾಗಣೇಶ್ ಭಕ್ತವೃಂದದ ಸದಸ್ಯರು, ಶ್ರೀ ಬ್ರಹ್ಮ ಮುಗೇರ್ಕಳ ದೈವಸ್ಥಾನ ಶಾಂತಿಕೆರೆ ಬೆಳ್ಮಣ್ ಜೀರ್ಣೋದ್ಧಾರ ಸಮಿತಿಯ ಸದಸ್ಯ ಹಾಗೂ ಭಾಯಂದರ್-ಮಿರಾರೋಡ್ ಪರಿಸರದ ಜನಪ್ರಿಯ ಸಂಘಟಕ, ಸಮಾಜ ಸೇವಕ, ಬಂಟ್ಸ್ ಫೋರಂ ಮಿರಾ-ಭಾಯಂದರ್ ಸಮಿತಿಯ ಸಕ್ರಿಯ ಸದಸ್ಯ, ಭಗವಾನ್ ಶ್ರೀ ನಿತ್ಯಾನಂದ ಸೇವಾ ಟ್ರಸ್ಟ್ನ ಪದಾಧಿಕಾರಿ, ಭಾ.ಜ.ಪ. ದಕ್ಷಿಣ ಭಾರತೀಯ ಘಟಕದ ಸದಸ್ಯ, ಹೊಟೇಲ್ ಉದ್ಯಮಿಗಳ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಹಗಲು-ರಾತ್ರಿ ಶ್ರಮಿಸಿದ, ತನ್ನ ಸರಳತೆ, ಸೌಮ್ಯ ನಡೆ-ನುಡಿಗಳಿಂದ, ಸ್ನೇಹ ಪರ ವ್ಯಕ್ತಿತ್ವದಿಂದ ಜನಾನುರಾಗಿ ಯಾಗಿದ್ದರು.
ಮೃತರು, ಪತ್ನಿ ಉಷಾ ಸುರೇಶ್ ಶೆಟ್ಟಿ, ಪುತ್ರ ನಿಶಾಂತ್ ಸುರೇಶ್ ಶೆಟ್ಟಿ ಸಹಿತ ನಾಲ್ಕು ಮಂದಿ ಸಹೋದರಿಯರು, ಅಪಾರ ಬಂಧು-ಮಿತ್ರರನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.ಪುತ್ರ ವಿದೇಶದಲ್ಲಿರುವ ಕಾರಣದಿಂದ ಮೃತರ ಅಂತಿಮ ವಿಧಿಯು ಸೋಮವಾರ ಸೆ. 22ರಂದು ಸಂಜೆ 3 ಗಂಟೆಗೆ ಪಡುಬೆಳ್ಮಣ್ಣುವಿನ ಕಮಲನಿವಾಸ ಪಡುಬೆಟ್ಟು ಮಡುಕು ಕೆರೆ ಮನೆಯಲ್ಲಿ ಜರಗಲಿರುವುದೆಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.









