
ಬೆಳ್ತಂಗಡಿ : ಸೋಮವಾರ ಬೆಳ್ತಂಗಡಿಯಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಲಾಗಿದೆ ಎಂಬ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಈ ಘಟನೆ ಸಂಪೂರ್ಣವಾಗಿ ವಿದ್ಯಾರ್ಥಿನಿಯೇ ರೂಪಿಸಿಕೊಂಡ ನಾಟಕ ಎನ್ನುವುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.
ಫೆ.9ರಂದು ಬೆಳಗ್ಗೆ ಸುಮಾರು 8:30ರ ವೇಳೆಗೆ ಬೆಳ್ತಂಗಡಿ ನಗರದ ಸುಧೇಮುಗರು ಪ್ರದೇಶದಲ್ಲಿ 16 ವರ್ಷದ ಕಾಲೇಜು ವಿದ್ಯಾರ್ಥಿನಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ, ಕಾರಿನಲ್ಲಿ ಬಂದ ಮೂವರು ಮುಸುಕುಧಾರಿಗಳು ತನ್ನನ್ನು ಅಪಹರಿಸಲು ಯತ್ನಿಸಿ ಹಲ್ಲೆ ನಡೆಸಿ ಚೂರಿಯಿಂದ ಗಾಯಗೊಳಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಕೈಗೆ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ತಕ್ಷಣವೇ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಪ್ರಕರಣದ ತನಿಖೆಗಾಗಿ ಬೆಳ್ತಂಗಡಿ ಪೊಲೀಸರು ದಿನವಿಡೀ ಶೋಧ ಕಾರ್ಯ ನಡೆಸಿದರೂ, ವಿದ್ಯಾರ್ಥಿನಿ ಹೇಳಿದಂತೆ ಯಾವುದೇ ಓಮ್ನಿ ಕಾರು ಆ ಪ್ರದೇಶದಲ್ಲಿ ಸಂಚರಿಸಿರುವುದು ಪತ್ತೆಯಾಗಿರಲಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆ ಕೈಗೊಂಡಾಗ, ಅಪಹರಣ ಯತ್ನವೂ ಅಲ್ಲ, ಚೂರಿ ಇರಿತದ ಘಟನೆಯೂ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಸಂಪೂರ್ಣ ಪ್ರಕರಣವೇ ವಿದ್ಯಾರ್ಥಿನಿ ರೂಪಿಸಿದ ನಾಟಕ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಲೇಜಿಗೆ ಹೋಗಲು ಇಚ್ಛೆಯಿರಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯೇ ಬ್ಲೇಡ್ ಬಳಸಿ ಕೈಗೆ ಗಾಯ ಮಾಡಿಕೊಂಡು ಅಪಹರಣದ ನಾಟಕವಾಡಿದ್ದಾಳೆ ಎಂಬುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



















