ಶಾಸಕರನ್ನು ಬಂಧಿಸದೆ ನೋಟಿಸ್ ಕೊಟ್ಟು ಬರಿಗೈಯಲ್ಲಿ ವಾಪಸ್ ಆದ ಪೊಲೀಸರು

ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬೆಳಗ್ಗೆ ಗರ್ಡಾಡಿ ಗ್ರಾಮದಲ್ಲಿರುವ ಅವರ ಮನೆಗೆ ಬೆಳ್ತಂಗಡಿ ಪೊಲೀಸರು ಅವರನ್ನು ಬಂಧಿಸಲು ಆಗಮಿಸಿದ್ದು ಈ ವೇಳೆ ವಿಷಯ ತಿಳಿದು ನೂರಾರು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಕೊನೆಗೆ ಪೊಲೀಸರು ಶಾಸಕರಿಗೆ ನೋಟಿಸ್ ಕೊಟ್ಟು ಬರಿಗೈಯಲ್ಲಿ ವಾಪಸ್ ತೆರಳಿದ ಘಟನೆ ನಡೆದಿದೆ.
ಶಾಸಕರ ಮನೆಯೊಳಗೆ ಪೊಲೀಸರು ಮತ್ತು ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ, ಭಾಗೀರಥಿ ಮುರುಳ್ಯ, ಉಮಾನಾಥ ಕೋಟ್ಯಾನ್, ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬ್ರಿಜೇಶ್ ಚೌಟ, ವಕೀಲರಾದ ಶಂಭು ಶರ್ಮ, ಅಜಯ್, ಸುಬ್ರಹ್ಮಣ್ಯ ಕುಮಾರ್ ಅಗರ್ತ, ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಹರಿಕೃಷ್ಣ ಬಂಟ್ವಾಳ ಮೊದಲಾದವರ ನಡುವೆ ಮಾತುಕತೆ, ವಾಗ್ವಾದ, ವಾದ, ಪ್ರತಿವಾದಗಳು ನಡೆದಿದ್ದು ನೋಟಿಸ್‌ಗೆ ಐದು ದಿನಗಳಲ್ಲಿ ಉತ್ತರಿಸುವ ಭರವಸೆಯನ್ನು ಶಾಸಕರು ನೀಡಿದ ಹಿನ್ನೆಲೆಯಲ್ಲಿ ಕೊನೆಗೆ ಪೊಲೀಸರು ಶಾಸಕರಿಗೆ ನೋಟಿಸ್ ನೀಡಿ ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಪೋಲಿಸರು ಶಾಸಕರನ್ನು ಬಂಧಿಸಲು ಸಾಧ್ಯವಾಗದೆ ಹಿಂದಿರುಗಿದರು.
ಘಟನೆಯ ಹಿನ್ನೆಲೆ:
ಶಾಸಕ ಹರೀಶ್ ಪೂಂಜ ಅವರು ಪೊಲೀಸ್ ಇಲಾಖೆಗೆ ಹಾಗೂ ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿ ಡಿಜೆ ಹಳ್ಳಿ ಕೆಜೆ ಹಳ್ಳಿ ಪೊಲೀಸ್ ಠಾಣೆಗೆ ಆದಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದು ಜೀವಬೆದರಿಕೆ ಒಡ್ಡಿದ್ದು ಈ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಪೋಲಿಸರ ಬೆಟಾಲಿಯನ್ ಶಾಸಕರನ್ನು ಬಂಧಿಸಲು ಮನೆಗೆ ಆಗಮಿಸಿದ್ದು ಮಾಹಿತಿ ತಿಳಿದ ಬಿಜೆಪಿ ಕಾರ್ಯಕರ್ತರು ಗುಂಪುಗೂಡಿ ಬಂದು ಜಮಾಯಿಸತೊಡಗಿದರು. ಕಾರ್ಯಕರ್ತರು ಪೋಲಿಸರಿಗೆ ಗೋ ಬ್ಯಾಕ್ ಘೋಷಣೆ ಕೂಗುತ್ತಿದ್ದರು. ಮೊದಲು ನೋಟಿಸ್ ನೀಡಬೇಕಿತ್ತು ಆದರೆ, ಯಾವುದೇ ನೋಟಿಸ್ ನೀಡಿಲ್ಲ. ನೋಟಿಸ್ ನೀಡದೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಕರೆಯುವಂತಿಲ್ಲ, ಹೀಗಾಗಿ ಅದು ಕಾನೂನು ಬಾಹಿರ ಎಂದು ಹೇಳಿದರು. ಅಂತೂ ಭಾರೀ ಪ್ರತಿರೋಧ, ಚರ್ಚೆ, ವಾದ, ವಿವಾದ, ಕಾನೂನು ಸಮರ ಹಾಗೂ ಕಾರ್ಯಕರ್ತರ ವಿರೋಧದ ನಡುವೆ ಶಾಸಕರನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗದೆ ನೋಟಿಸ್ ನೀಡಿ ಹಿಂದಿರುಗಿದರು.
ಓರ್ವ ಡಿವೈಎಸ್‌ಪಿ, 3 ಸರ್ಕಲ್ ಇನ್ಸ್‌ಪೆಕ್ಟರ್‌ಗಳು, 25 ಎಸ್.ಐ.ಗಳು, 9 ಬಸ್‌ಗಳಲ್ಲಿ ಬಂದ ನೂರಕ್ಕೂ ಹೆಚ್ಚು ಪೊಲೀಸರ ಬೆಟಾಲಿಯನ್ ಶಾಸಕರ ಮನೆಯ ಸುತ್ತ ಜಮಾಗೊಂಡು ಬಂಧಿಸಲು ಪ್ರಯತ್ನ ನಡೆಸಿದ್ದರು.