
ಬೆಳಗಾವಿ: ಬೆಳಗಾವಿ ನಗರ ಈಗ 1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ 39ನೇ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಗೆ ತಯಾರಾಗಿದ್ದು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಗಣ್ಯರ ದಂಡೇ ಬೆಳಗಾವಿಗೆ ಬರಲಿದೆ.
ಇಡೀ ನಗರ ವಿದ್ಯುತ್ ದೀಪಾಲಂಕಾರಗಳಿಂದ ಝಗಮಗಿಸುತ್ತಿದ್ದು ಗಲ್ಲಿ, ಗಲ್ಲಿಗಳಲ್ಲಿ ಹಬ್ಬದ ವಾತಾವರಣ ಕಂಡುಬರುತ್ತಿದೆ. ನಗರದ ಪ್ರಮುಖ ಮಾರ್ಗಗಳಲ್ಲಿ ಮಹಾತ್ಮ ಗಾಂಧೀಜಿ ಹೆಜ್ಜೆ ಗುರುತು ಸ್ಮರಿಸುವ ಸ್ವಾತಂತ್ರ್ಯ ಹೋರಾಟದ ಸನ್ನಿವೇಶವನ್ನು ಜನರಿಗೆ ಪರಿಚಯಿಸುವ ಕಾರ್ಯಕ್ಕೆ ನಗರ ಸಿದ್ಧತೆ ನಡೆಸಿದ್ದು ಪ್ರಮುಖ ವೃತ್ತಗಳು, ಮುಖ್ಯ ರಸ್ತೆಗಳು, ದ್ವಾರಗಳಲ್ಲಿ ಕಾಂಗ್ರೆಸ್ ಅಧಿವೇಶನದ ಚಿತ್ರ ಪ್ರದರ್ಶಿಸಲಾಗಿದೆ. ಜತೆಗೆ ಸ್ವಾತಂತ್ರ್ಯ ಹೋರಾಟದ ಚಿತ್ರಗಳನ್ನು ದೀಪಗಳಲ್ಲೇ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ.
ಬೆಳಗ್ಗೆ 10 ಗಂಟೆಗೆ ವೀರಸೌಧದಲ್ಲಿ ಗಾಂಧಿ ಅವರ ಪುತ್ಥಳಿ ಅನಾವರಣ, ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಗುತ್ತಿದೆ. ಬೆಳಗ್ಗೆ 10.45ಕ್ಕೆ ಖಾದಿ ಮೇಳ ಉದ್ಘಾಟನೆ ನಡೆಯಲಿದ್ದು ಬೆಳಗ್ಗೆ 11.15ಕ್ಕೆ ಗಂಗಾಧರ ದೇಶಪಾಂಡೆ ಅವರ ಸ್ಮಾರಕ ಅನಾವರಣ, ನಂತರ ಗಂಗಾಧರ ದೇಶಪಾಂಡೆ ಅವರ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ.
ಡಿ.27ರಂದು ನಗರದ ಕ್ಲಬ್ ರಸ್ತೆಯ ಸಿಪಿಎಡ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಯಲಿದ್ದು ಸಮಾವೇಶಕ್ಕೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂದು ಹೆಸರಿಡಲಾಗಿದೆ. ಸುಮಾರು 1.5 ಲಕ್ಷ ಜನತೆಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಎರಡು ದಿನಗಳ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಬೇರೆ ರಾಜ್ಯದಿಂದ ಭಾಗವಹಿಸುವ ಐದು ಸಾವಿರ ಗಣ್ಯರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ.
ಡಿ.27ರಂದು ಬೆಳಗ್ಗೆ 10.30ಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಸುವರ್ಣ ವಿಧಾನಸೌಧ ಆವರಣದಲ್ಲಿ ಗಾಂಧೀಜಿ ಅವರ ಬೃಹತ್ ಪುತ್ಥಳಿಯನ್ನು ಅನಾವರಣಗೊಳಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸ್ವಾತಂತ್ರ್ಯ ಯೋಧರು, ಸಂಸದರು, ಶಾಸಕರು, ಗಣ್ಯ ಸೇರಿ ಸುಮಾರು 600 ಜನ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸುಮಾರು 10 ಸಾವಿರ ಪೊಲೀಸರನ್ನು ನಿಯೋಜನೆ ಮಾಡಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.



















