ಅದಕ್ಕೂ ಬಗ್ಗದಿದ್ದಾಗ ಅವರನ್ನೇ ಇಲ್ಲವಾಗಿಸುವುದು ಬಿಜೆಪಿ ಮತ್ತು ಸಂಘಪರಿವಾರಕ್ಕೆ ಹೊಸದೇನಲ್ಲ : ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಎದೆಗೆ ಗುಂಡು ಹೊಡೆಯುತ್ತೇವೆ ಎಂಬ ಕೇರಳ ಬಿಜೆಪಿ ವಕ್ತಾರನ ವಿರುದ್ಧ ಕ್ರಮ ತೆಗೆದುಕೊಳ್ಳದ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಎಕ್ಸ್ ಖಾತೆಯಲ್ಲಿ ಕಿಡಿಕಾರಿದ್ದು ಬೆದರಿಕೆ ಒಡ್ಡಿ ಸೈದ್ಧಾಂತಿಕ ವಿರೋಧಿಗಳ ಧ್ವನಿ ಅಡಗಿಸುವುದು, ಅದಕ್ಕೂ ಬಗ್ಗದಿದ್ದಾಗ ಅವರನ್ನೇ ಇಲ್ಲವಾಗಿಸುವುದು ಬಿಜೆಪಿ ಮತ್ತು ಸಂಘಪರಿವಾರಕ್ಕೆ ಹೊಸದೇನಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ನಿರಂತರ ಧ್ವನಿಯೆತ್ತುತ್ತಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಎದೆಗೆ ಗುಂಡು ಹೊಡೆಯುತ್ತೇವೆ, ಹುಷಾರ್! ಎಂದು ಬಿಜೆಪಿ ವಕ್ತಾರರೊಬ್ಬರು ಬಹಿರಂಗವಾಗಿ ಜೀವ ಬೆದರಿಕೆ ಒಡ್ಡಿದರೂ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು ನೋಡಿದರೆ ಹೇಳಿಕೆಯ ಬಗ್ಗೆ ಅವರಿಗೂ ಸಮ್ಮತಿ ಇದೆಯೇ ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡಿದೆ.
ಮೊದಲೆಲ್ಲ ತೆರೆಮರೆಯಲ್ಲಿ ನಿಂತು ತಮ್ಮ ವಿರೋಧಿಗಳ ಹತ್ಯೆಗಳಿಗೆ ಬೆಂಬಲ ನೀಡುತ್ತಾ ಬಂದವರು, ಈಗ ನೇರಾ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಎದುರಾಳಿಗಳನ್ನು ಸಂವಾದ, ಚರ್ಚೆಗಳ ಮೂಲಕ ಸೈದ್ಧಾಂತಿಕವಾಗಿ ಎದುರಿಸಲಾಗದವರು ದೈಹಿಕವಾಗಿ ಮುಗಿಸಲು ಹೊರಟಿರುವುದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ.
ರಾಹುಲ್ ಗಾಂಧಿಯವರ ಕುಟುಂಬಕ್ಕೆ ಪ್ರಾಣ ಬೆದರಿಕೆ ಇದು ಮೊದಲಲ್ಲ. ಇಂತಹ ಕೊಲೆಗಡುಕರಿಂದಲೇ ರಾಹುಲ್ ಅವರು ತಮ್ಮ ಅಜ್ಜಿ ಮತ್ತು ಅಪ್ಪನನ್ನು ಕಳೆದುಕೊಂಡವರು. ರಾಹುಲ್ ಗಾಂಧಿ ಈಗ ಒಬ್ಬಂಟಿಯಲ್ಲ, ಅವರ ಬೆಂಬಲಕ್ಕೆ ಕೋಟ್ಯಂತರ ಸಂಖ್ಯೆಯ ಕಾರ್ಯಕರ್ತರಿದ್ದಾರೆ ಎನ್ನುವುದು ಬಿಜೆಪಿಯ ಕೊಲೆಗಡುಕ ಮನಸ್ಸುಗಳಿಗೆ ತಿಳಿದಿರಲಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಹಂಚಿಕೊಂಡಿದ್ದಾರೆ.



















