
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುವ ಭಕ್ತರಿಗಾಗಿ (ಕೆಎಸ್‌ಟಿಡಿಸಿ) ವಿಶೇಷ ಪ್ರವಾಸ ಪ್ಯಾಕೇಜ್‌ನ್ನು ಪರಿಚಯಿಸಿದೆ. ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ, ವಿಶೇಷವಾಗಿ ಕರ್ನಾಟಕದಿಂದ ಮಂತ್ರಾಲಯಕ್ಕೆ ಭಕ್ತರ ಭೇಟಿ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಪ್ಯಾಕೇಜ್ ಬಿಡುಗಡೆ ಮಾಡಲಾಗಿದೆ.
ರಾಘವೇಂದ್ರ ಸ್ವಾಮಿ ಕರ್ನಾಟಕದ ಭಕ್ತರ ಆರಾಧ್ಯ ದೈವವಾಗಿದ್ದು, ಆಂಧ್ರ ಗಡಿಯಲ್ಲಿರುವ ಮಂತ್ರಾಲಯಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಭಕ್ತರ ಅನುಕೂಲಕ್ಕಾಗಿ ಪ್ರತಿ ಬುಧವಾರ ಮತ್ತು ಶುಕ್ರವಾರ ಈ ವಿಶೇಷ ಪ್ಯಾಕೇಜ್ ಕಾರ್ಯನಿರ್ವಹಿಸಲಿದೆ ಎಂದು ಕೆಎಸ್‌ಟಿಡಿಸಿ ತಿಳಿಸಿದೆ. ಭಕ್ತರಿಗೆ ಸುಗಮ ದರ್ಶನ ಸಿಗುವಂತೆ ಪ್ರಯಾಣ ವೇಳಾಪಟ್ಟಿಯನ್ನು ರೂಪಿಸಲಾಗಿದೆ.
ಮೊದಲನೇ ದಿನ ರಾತ್ರಿ 8.00 ಗಂಟೆಗೆ ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಯಿಂದ ನಿರ್ಗಮನವಾಗಿ ಎರಡನೇ ದಿನ ಬೆಳಿಗ್ಗೆ 4.30ರಿಂದ 6.00ರವರೆಗೆ ಫ್ರೆಶ್‌ಅಪ್ ಆಗಲು ಸಮಯವಕಾಶವಿರುತ್ತದೆ. ಬೆಳಿಗ್ಗೆ 6.30ರಿಂದ 10.00ರವರೆಗೆ ರಾಘವೇಂದ್ರ ಸ್ವಾಮಿಯ ದರ್ಶನ ನಡೆಯಲಿದ್ದು, ಬಳಿಕ 11.00ರಿಂದ 12.00ರವರೆಗೆ ಪಂಚಮುಖಿ ಆಂಜನೇಯ ದೇವಸ್ಥಾನ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಮಧ್ಯಾಹ್ನ 1.00ರಿಂದ 2.00ರವರೆಗೆ ಊಟದ ವ್ಯವಸ್ಥೆ ಇದ್ದು, ರಾತ್ರಿ 9.00ಕ್ಕೆ ಯಶವಂತಪುರದಲ್ಲಿರುವ ಕೆಎಸ್‌ಟಿಡಿಸಿ ಕಚೇರಿಗೆ ಪ್ರಯಾಣ ಮುಕ್ತಾಯಗೊಳ್ಳಲಿದೆ.
ಈ ವಿಶೇಷ ಪ್ಯಾಕೇಜ್‌ಗೆ ಒಬ್ಬರಿಗೆ ₹2,780 ನಿಗದಿಪಡಿಸಲಾಗಿದ್ದು ಟಿಕೆಟ್ ರದ್ದುಪಡಿಸುವ ಸಂದರ್ಭದಲ್ಲಿ 48 ಗಂಟೆಗಳ ಮೊದಲು ರದ್ದು ಮಾಡಿದರೆ 10%, 24 ಗಂಟೆಗಳ ಮೊದಲು ರದ್ದು ಮಾಡಿದರೆ 25% ಶುಲ್ಕ ಕಡಿತಗೊಳ್ಳಲಿದೆ. 24 ಗಂಟೆಗಳ ಒಳಗೆ ರದ್ದು ಮಾಡಿದರೆ ಮರುಪಾವತಿ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ ಕೆಎಸ್‌ಟಿಡಿಸಿ ಅಧಿಕೃತ ವೆಬ್‌ಸೈಟ್‌ನ್ನು ಭೇಟಿ ನೀಡುವಂತೆ ತಿಳಿಸಲಾಗಿದೆ.








