ಆರೋಗ್ಯ ಎಚ್ಚರಿಕೆ ನೀಡಿದ ತಜ್ಞರು

ಬೆಂಗಳೂರು: ಹೆಚ್ಚುತ್ತಿರುವ ವಾಹನ ಸಂಖ್ಯೆಗಳಿಂದ ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಏರುಪೇರಾಗುತ್ತಲಿದ್ದು ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ ಇಂದಿನ ಗಾಳಿಯ ಗುಣಮಟ್ಟ 173 ಇದ್ದು, ನಗರದ ಹಲವು ಭಾಗಗಳಲ್ಲಿ ಇದಕ್ಕೂ ಕಳಪೆ ಗುಣಮಟ್ಟ ಕಂಡುಬರುತ್ತಿದೆ.
ಇಂದೂ ಸಹ PM2.5 87 ಇದ್ದರೆ, PM10 121 ಇದೆ. ಕಳೆದ ಕೆಲ ದಿನಕ್ಕೆ ಹೋಲಿಸಿದರೆ ಇಂದಿನ ಏರ್ ಕ್ವಾಲಿಟಿ ಸುಧಾರಿಸಿದೆ ಎನಿಸಿದರೂ WHO ಪ್ರಕಾರ ಈ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ.
ಬೆಂಗಳೂರಿನಲ್ಲಿ 1.2 ಕೋಟಿ ದಾಟಿರುವ ವಾಹನಗಳಿಂದ ಹೊರಸೂಸುವ ಹೊಗೆ ನಗರದ ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿದೆ. ಸಂಚಾರ ದಟ್ಟಣೆ ಹೆಚ್ಚಿರುವ ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್‌ನಂತಹ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವು ನಗರದ ಸರಾಸರಿಗಿಂತ 30% ಹೆಚ್ಚು ದಾಖಲಾಗುತ್ತಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗಾಳಿಯ ಗುಣಮಟ್ಟ 150 ದಾಟಿದರೆ ಶ್ವಾಸಕೋಶ ಕಾಯಿಲೆಯ ಜೊತೆಗೆ ಹೃದಯ ಸಂಬಂಧಿ ರೋಗಗಳೂ ಬರಬಹುದೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯು ವಾಯುಮಾಲಿನ್ಯಕ್ಕೆ ಕಾರಣ ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದು ನಗರದೆಲ್ಲೆಡೆ 85 ಮೆಟ್ರೋ ನಿಲ್ದಾಣ, 55 ಬಿಎಂಟಿಸಿ ಟಿಟಿಎಂಸಿ, ಪ್ರಮುಖ ರಸ್ತೆ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಸೆನ್ಸರ್ ಅಳವಡಿಕೆ ನಡೆಯಲಿದೆ. ಪ್ರತಿ ಮಾಪನಕ್ಕೆ ಗರಿಷ್ಠ 3 ಲಕ್ಷ ರೂ. ವೆಚ್ಚವಾಗಲಿದ್ದು, ಒಟ್ಟು 15 ಕೋಟಿ ರೂ. ವೆಚ್ಚದಲ್ಲಿ ವಾಯುಮಾಲಿನ್ಯ ತಪಾಸಣಾ ಉಪಕರಣ ಖರೀದಿಸಲು ತೀರ್ಮಾನಿಸಿದೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ
ಬೆಂಗಳೂರು –173
ಮಂಗಳೂರು – 154
ಮೈಸೂರು – 132
ಬೆಳಗಾವಿ – 161
ಕಲಬುರ್ಗಿ – 105
ಶಿವಮೊಗ್ಗ – 92
ಬಳ್ಳಾರಿ – 201
ಹುಬ್ಬಳ್ಳಿ- 108
ಉಡುಪಿ –142
ವಿಜಯಪುರ –82
ಉತ್ತಮ- 0-50
ಮಧ್ಯಮ – 50-100
ಕಳಪೆ – 100-150
ಅನಾರೋಗ್ಯಕರ – 150-200
ಗಂಭೀರ – 200 – 300
ಅಪಾಯಕಾರಿ – 300 -500+





