
ಬೆಂಗಳೂರು: ಕರ್ನಾಟಕ ಸರ್ಕಾರವು ಬೆಂಗಳೂರು ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆಯನ್ನು ನೀಡಲು ಹಾಗೂ ಸಾವನ್ನಪ್ಪಿದವರ ಮನೆಯ ಆರ್ಥಿಕ ಸಹಾಯದ ಉದ್ದೇಶದಿಂದ ಪರಿಹಾರ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.
ನಾಯಿ ಕಚ್ಚಿದ ಗಾಯ, ಮೂಗೇಟುಗಳು ಮತ್ತು ರಕ್ತಸ್ರಾವದ ಸಮಸ್ಯೆ, ಸೀಳುವಿಕೆ, ಇಂತಹ ಗಾಯಗಳು ಕಂಡು ಬಂದರೆ 5 ಸಾವಿರ ರೂ. ವರೆಗೆ ಪರಿಹಾರವನ್ನು ನೀಡಲಾಗುವುದು. ಈ 5,000 ರೂ.ಗಳಲ್ಲಿ 3,500 ರೂ.ಗಳನ್ನು ನಗರಾಭಿವೃದ್ಧಿ ಇಲಾಖೆ ನೀಡುತ್ತದೆ. ಉಳಿದ 1,500 ರೂ. ಅನ್ನು ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ವರ್ಗಾಯಿಸಲಾಗುತ್ತದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ವಿಶೇಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ನಾಯಿ ಕಚ್ಚಿದ ವ್ಯಕ್ತಿಗೆ ತಕ್ಷಣದ ವೈದ್ಯಕೀಯ ಆರೈಕೆ ಸಿಗುವಂತೆ ನೋಡಿಕೊಳ್ಳುವುದು ಈ ನಿಧಿಯ ಉದ್ದೇಶವಾಗಿದ್ದು ಪರಿಹಾರದ ಒಂದು ಭಾಗವನ್ನು ಆರೋಗ್ಯ ಟ್ರಸ್ಟ್‌ಗೆ ನೀಡಲಾಗುವುದು. ಸರ್ಕಾರವು ಆರಂಭಿಕ ಚಿಕಿತ್ಸಾ ವೆಚ್ಚವನ್ನು ಮುಂಗಡವಾಗಿ ಭರಿಸುವ ಯೋಜನೆಯನ್ನು ಕೂಡ ಹೊಂದಿದ್ದು ಇದರಿಂದ ಯಾರಿಗೆ ಮುಂಗಡವಾಗಿ ಹಣ ಪಾವತಿ ಮಾಡಲು ಸಾಧ್ಯವಾಗುವುದಿಲ್ಲವೋ, ಅವರಿಗೆ ಸಹಾಯವಾಗಲಿದೆ.
ಇನ್ನು ಬೀದಿ ನಾಯಿ ದಾಳಿಯಿಂದ ಅಥವಾ ರೇಬೀಸ್‌ನಿಂದ ವ್ಯಕ್ತಿ ಸಾವನ್ನಪ್ಪಿದರೆ, ಅವರ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು. ಇದರಿಂದ ಆರ್ಥಿಕ ಒತ್ತಡವನ್ನು ಎದುರಿಸುತ್ತಿರುವ ಕುಟುಂಬಗಳಿಗೆ ಸಹಾಯವಾಗುತ್ತದೆ.






















































