
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬಿ.ಎಸ್ಸಿ ನರ್ಸಿಂಗ್, ಬಿ.ಫಾರ್ಮ, ಫಾರ್ಮ-ಡಿ ಕೋರ್ಸುಗಳಿಗೆ ಅಂತಿಮ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಅ.6ರ ಬೆಳಿಗ್ಗೆ 11ರೊಳಗೆ ಹೊಸದಾಗಿ ತಮ್ಮ ಇಚ್ಛೆ/ಆಯ್ಕೆಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಬೇಕು ಎಂದು ತಿಳಿಸಿದೆ.
ಈ ಕುರಿತು ಶುಕ್ರವಾರ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಬಿ.ಎಸ್ಸಿ. ನರ್ಸಿಂಗ್ ಕೋರ್ಸಿಗೆ ಸರ್ಕಾರ ಹೆಚ್ಚಿಸಿರುವ ಸೀಟುಗಳು, ಹಿಂದಿನ ಸೀಟುಗಳ ಹಂಚಿಕೆಯ ನಂತರ ಭರ್ತಿಯಾಗದೇ ಉಳಿದಿರುವ/ರದ್ದುಗೊಂಡಿರುವ/ಹೊಸದಾಗಿ ಸೇರಿಸಲಾದ ಬಿ.ಫಾರ್ಮ ಮತ್ತು ಫಾರ್ಮ-ಡಿ ಸೀಟುಗಳನ್ನು ಈ ಹಂಚಿಕೆಗೆ ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರಿ ಕಾಲೇಜುಗಳಲ್ಲಿರುವ ಸೀಟುಗಳು ಹಾಗೂ ಖಾಸಗಿ ಕಾಲೇಜುಗಳ ‘ಜಿ’ ಸೀಟುಗಳು ಈ ಹಂಚಿಕೆ ವ್ಯಾಪ್ತಿಗೆ ಒಳಪಡುತ್ತವೆ. ಅಭ್ಯರ್ಥಿಗಳು ಈ ಹಿಂದಿನ ಸುತ್ತುಗಳಲ್ಲಿ ದಾಖಲಿಸಿದ ಇಚ್ಛೆ/ಆಯ್ಕೆಗಳನ್ನು ಈ ಹಂತದ ಹಂಚಿಕೆಗೆ ಪರಿಗಣಿಸುವುದಿಲ್ಲ. ಕಾಲೇಜುವಾರು, ವರ್ಗವಾರು ಮತ್ತು ಕೋರ್ಸುವಾರು ವಿವರವಾದ ಸೀಟ್ ಮ್ಯಾಟ್ರಿಕ್ಸ್ ಅನ್ನು ಕೆಇಎ ವೆಬ್ ಸೈಟಿನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದು ಅಂತಿಮ ಸುತ್ತಿನ ಸೀಟು ಹಂಚಿಕೆಯಾಗಿರುವುದರಿಂದ ಆಪ್ಷನ್ ಎಂಟ್ರಿ ಮಾಡಿದ ಕಾಲೇಜಿನಲ್ಲಿ ಸೀಟು ಹಂಚಿಕೆಯಾದರೆ ಕಡ್ಡಾಯವಾಗಿ ಪ್ರವೇಶ ಪಡೆಯಬೇಕು. ಹೀಗಾಗಿ, ಅಭ್ಯರ್ಥಿಗಳು ಸೇರಬಹುದಾದ ಕಾಲೇಜನ್ನು ಖಚಿತಪಡಿಸಿಕೊಂಡು ಆಪ್ಷನ್ ಎಂಟ್ರಿ ನಮೂದಿಸಬೇಕು. ಸೀಟ್ ಮ್ಯಾಟ್ರಿಕ್ಸ್ ನ ಪರಿಷ್ಕೃತ ಮಾಹಿತಿಗಾಗಿ ಅಭ್ಯರ್ಥಿಗಳು ಕೆಇಎ ವೆಬ್ ಸೈಟ್ ಅನ್ನು ಆಗಾಗ ಗಮನಿಸುತ್ತಿರಬೇಕು ಎಂದು ಸೂಚಿಸಲಾಗಿದೆ.



















