
ವಿಧಾನಸಭೆ: ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ನೀಡಲು ನಿಗದಿಪಡಿಸಿರುವ ₹1.20 ಲಕ್ಷ ಆದಾಯ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸುವ ಕುರಿತು ಶೀಘ್ರದಲ್ಲೇ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಸದಸ್ಯ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ನಗರ ಪ್ರದೇಶಗಳಲ್ಲಿ ಬಿಪಿಎಲ್ ಕಾರ್ಡ್‌ಗಳ ಪ್ರಮಾಣ ಕಡಿಮೆ ಇರುವುದನ್ನು ಪ್ರಸ್ತಾಪಿಸಿ, ಬೆಂಗಳೂರು ನಗರದಲ್ಲಿ ಶೇ.50ರಷ್ಟು ಜನರಿಗೆ ಕಾರ್ಡ್ ನೀಡಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ 1.24 ಕೋಟಿ ಬಿಪಿಎಲ್ ಕಾರ್ಡ್‌ಗಳು ಇದ್ದು, 4.50 ಕೋಟಿ ಜನರು ಫಲಾನುಭವಿಗಳಾಗಿದ್ದಾರೆ. ಆದಾಗ್ಯೂ, ಕೇಂದ್ರದ ಸೂಚನೆಯಂತೆ ಕೆಲ ಕಾರ್ಡ್‌ಗಳನ್ನು ಮರುಪರಿಶೀಲಿಸಿ ಎಪಿಎಲ್ ವ್ಯಾಪ್ತಿಗೆ ತರಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ ಬಿಪಿಎಲ್ ಕಾರ್ಡ್‌ಗಳ ಪ್ರಮಾಣ ಕಡಿಮೆ ಇರುವುದನ್ನು ಪರಿಶೀಲಿಸಲು ಸರ್ವೆ ನಡೆಸಿ, ಎರಡು ತಿಂಗಳೊಳಗೆ ವರದಿ ಆಧಾರವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.






















































