ನಿರೂಪಕ ಕಿಚ್ಚ ಸುದೀಪ್ ಸೇರಿದಂತೆ ಅಶ್ವಿನಿ ಗೌಡ ಹಾಗೂ ರಿಷಾ ಗೌಡ ವಿರುದ್ಧ ದೂರು ದಾಖಲಿಸಿದ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರ

ರಾಮನಗರ: ಕನ್ನಡದ ಬಿಗ್ ಬಾಸ್ ಸೀಸನ್-12 ಪದೇ ಪದೇ ವಿವಾದಕ್ಕೆ ಕಾರಣವಾಗಿ ದೂರು ದಾಖಲಾಗುತ್ತಿದ್ದು ಇದೀಗ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ ಅಪಮಾನ ಮಾಡಿದ್ದಾರೆ ಎಂದು ಕಾರ್ಯಕ್ರಮದ ನಿರೂಪಕ ಸುದೀಪ್ ಸೇರಿದಂತೆ ಅಶ್ವಿನಿ ಗೌಡ ಮತ್ತು ರಿಷಾ ಗೌಡ ಅವರ ವಿರುದ್ಧ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರ ಎಂಬವರು ಎಸ್ಪಿ ಕಚೇರಿಗೆ ದೂರು ನೀಡಿದ್ದು ಈ ಹಿನ್ನೆಲೆ ಬಿಡದಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಗ್ ಬಾಸ್ ಸೀಸನ್ 12ರ ವಾರಾಂತ್ಯದ ಕಾರ್ಯಕ್ರಮದಲ್ಲಿ ನಿರೂಪಕ ಕಿಚ್ಚ ಸುದೀಪ್ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರೊಂದಿಗೆ ಮಾತನಾಡುತ್ತಾ ‘ಅದೇ ನನ್ನ ಪಿತ್ತ ನೆತ್ತಿಗೆ ಏರುತ್ತಲ್ವಾ ಅದಕ್ಕಿಂತ ಮೊದಲು, ರಕ್ಷಿತಾ ಅವರೇ ನಾನು ಎರಡು ರೀತಿಯಲ್ಲಿ ನಗುತ್ತೇನೆ ಒಂದು ತುಂಬಾ ನಗು ಬಂದಾಗ ಇನ್ನೊಂದು ಏರಿದಾಗ’ ಎಂದು ಹೇಳಿದ್ದರು. ಇದು ದರ್ಪದ ಮಾತಾಗಿದ್ದು ಇಡೀ ಮಹಿಳಾ ಕುಲಕ್ಕೆ ಮಾಡುತ್ತಿರುವ ಅವಮಾನ ಎಂದು ದೂರಿನಲ್ಲಿ ಆರೋಪಿಸಿರುವ ಸಂಧ್ಯಾ ಪವಿತ್ರಾ ಅವರು ನಟ ಕಿಚ್ಚ ಸುದೀಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದಲ್ಲದೆ ಸ್ಪರ್ಧಿ ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿ ವಿರುದ್ಧ ಎಸ್ ಕೆಟಗರಿ ಎಂಬ ಪದಬಳಕೆ ಮಾಡಿದ್ದು ಇದು ಜಾತಿ ಆಧಾರಿತ ಹೇಳಿಕೆಯಾಗಿದೆ. ಇನ್ನು ರಿಷಾ ಗೌಡ ಸಹಸ್ಪರ್ಧಿ ಗಿಲ್ಲಿ ನಟನ ಮೇಲೆ ಹಲ್ಲೆ ಮಾಡಿದ್ದು ಇಂತಹ ಅವ್ಯವಸ್ಥೆಯನ್ನು ನೋಡಿಯೂ ಕಾರ್ಯಕ್ರಮದ ಆಯೋಜಕರು ಸುಮ್ಮನಿರುವುದು ಸರಿಯಲ್ಲ ಎಂದು ಊರಿನಲ್ಲಿ ಉಲ್ಲೇಖಿಸಲಾಗಿದೆ.






















































