
ಬೆಳಗಾವಿ: ಕಳೆದ ಕೆಲದಿನಗಳ ಹಿಂದೆ ಕನ್ನಡ ಮಾತನಾಡು ಎಂದಿದ್ದಕ್ಕೆ ಬಸ್ ಕಂಡಕ್ಟರ್ ನ ಮೇಲೆ ಹಲ್ಲೆ ಮಾಡಿ ಬಳಿಕ ಪೋಕ್ಸೋ ದೂರು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದ್ದು ಅದೇನೆಂದರೆ ಬಾಲಕಿಯ ಪೋಷಕರು ಪೋಕ್ಸೋ ಕೇಸ್ ವಾಪಸ್ ಪಡೆದಿರುವುದು ವರದಿಯಾಗಿದೆ.
ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಪೋಷಕರು ಬೆಳಗಾವಿಯಿಂದ ಬಾಳೆಕುಂದ್ರಿಗೆ ಬಾಲಕಿ ಬರುತ್ತಿದ್ದಾಗ ಟಿಕೆಟ್ ಪಡೆಯುವ ಕುರಿತು ಜಗಳ ಆರಂಭವಾಗಿದ್ದು ಬಳಿಕ ಇದನ್ನು ಕನ್ನಡ, ಮರಾಠಿ ಎಂಬ ವಿವಾದ ಮಾಡಿ ಅಪಪ್ರಚಾರ ಮಾಡುವುದು ಸರಿಯಲ್ಲ. ನಾವು ಕನ್ನಡದ ಅಭಿಮಾನಿಗಳಾಗಿದ್ದು ನಮ್ಮಲ್ಲಿ ಜಾತಿ ಭೇದ ಭಾವ ಇಲ್ಲ. ಕನ್ನಡ ಮರಾಠಿ ಎಂದು ಸುಳ್ಳು ಪ್ರಚಾರ ಮಾಡಿ ಇದನ್ನು ಮುಂದಿಟ್ಟುಕೊಂಡು ಕರ್ನಾಟಕ ಮಹಾರಾಷ್ಟ್ರ ನಡುವೆ ಜಗಳ ಆರಂಭವಾಗಿದೆ. ನಮ್ಮ ಮಗಳಿಗೆ ಅನ್ಯಾಯವಾಗಿದ್ದು ನಾವು ಪ್ರಕರಣ ವಾಪಸ್ ಪಡೆಯುತ್ತೇವೆ. ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಕೇಸ್ ಅನ್ನು ಸ್ವಇಚ್ಛೆಯಿಂದ ವಾಪಸ್ ಪಡೆಯುತ್ತಿದ್ದು ನಮ್ಮ ಮೇಲೆ ಯಾವುದೇ ಒತ್ತಡ ಇಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.








