
ಮಂಗಳೂರು: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪುರಾಣ ಪ್ರಸಿದ್ಧ ಬಪ್ಪನಾಡು ದುರ್ಗಾಪರಮೇಶ್ವರಿ ದೇವಿಯ ಬ್ರಹ್ಮರಥೋತ್ಸವ ನಡೆಯುವ ವೇಳೆ ತೇರು ಎಳೆಯುತ್ತಿದ್ದ ಸಂದರ್ಭದಲ್ಲಿ ದೇವರನ್ನು ಹೊತ್ತು ಸಾಗುತ್ತಿದ್ದ ಬ್ರಹ್ಮರಥ ಏಕಾಏಕಿ ಜನರಿದ್ದ ಕಡೆ ಮುಗುಚಿ ಬಿದ್ದಿತ್ತು. ತೇರಿನ ಒಳಗೆ ಕುಳಿತಿದ್ದ ಅರ್ಚಕರು ಸೇರಿದಂತೆ ಸಾವಿರಾರು ಭಕ್ತರು ಪವಾಡ ಸದೃಶ ಎಂಬಂತೆ ಪಾರಾಗಿದ್ದರು. ಆದರೆ ಇದೀಗ ಈ ಘಟನೆ ತುಳುನಾಡಿನ ಕಾರ್ಣಿಕ ದೈವದ ರೋಷಾವೇಷಕ್ಕೆ ಕಾರಣವಾಗಿದ್ದು ಎಲ್ಲರನ್ನೂ ಕಾಪಾಡಿದ್ದು ನಾನೇ, ತಿದ್ದಿಕೊಳ್ಳದಿದ್ದರೆ ಇನ್ನಷ್ಟು ಅಪಾಯ ಎದುರಾಗಲಿದೆ ಎಂದು ಎಚ್ಚರಿಕೆಯ ನುಡಿ ನೀಡಿದೆ.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ರಥೋತ್ಸವದ ವೇಳೆ ತೇರು ಮುರಿದು ಬಿದ್ದ ದುರ್ಘಟನೆಯ ಬಗ್ಗೆ ಸದ್ಯ ಜಾರಂದಾಯ ಮತ್ತು ಬಂಟ ದೈವಗಳು ನೇಮೋತ್ಸವದ ವೇಳೆ ಆಕ್ರೋಶ ಹೊರಹಾಕಿದ್ದು, ಬಂಟ ದೈವದ ರೋಷಾವೇಶ ಕಂಡು ಭಕ್ತರು ಬೆಚ್ಚಿ ಬಿದಿದ್ದಾರೆ.
ಒಂದು ಜೀವಕ್ಕೂ ಗಾಯ ಆಗೋದಕ್ಕೆ ಬಿಟ್ಟಿಲ್ಲ ನಾನು. ಎಷ್ಟು ಜೀವಕ್ಕೆ ಹಾನಿ ಆಗುತ್ತಿತ್ತು? ಮುಂದಕ್ಕೆ ಎಲ್ಲವನ್ನೂ ಸರಿ ಮಾಡುತ್ತೇನೆ. ತುಂಬಾ ವಿಷಯಗಳು ಇದೆ. ನನಗಿರುವ ಅಧಿಕಾರ ಬೇರೆ ಯಾವ ದೈವಕ್ಕೂ ಇಲ್ಲ. ಪ್ರಶ್ನಾಚಿಂತನೆ ಹಾಕಲೇಬೇಕಾಗಿದೆ. ಆ ಸಂದರ್ಭದಲ್ಲಿ ನಿಮ್ಮ ನಾಲಗೆಯ ಮೂಲಕ ನಾನು ಮಾತನಾಡುತ್ತೇನೆ.
ಪುನಃ ಬ್ರಹ್ಮಕಲಶ ಆಗಿ ಹೊಸ ಬ್ರಹ್ಮ ರಥೋತ್ಸವದಲ್ಲಿ ರಥೋತ್ಸವ ಆಗಲಿ. ಆ ಸಂದರ್ಭದಲ್ಲಿ ಯಾರು ತಡೆಯುತ್ತಾರೆಂದು ನಾನು ನೋಡುತ್ತೇನೆ. ಯಾವ ರೀತಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕೆಂಬ ಲೆಕ್ಕಾಚಾರ ನನಗೆ ಬಿಡಿ. ಈಗ ಒಳ್ಳೆ ರೀತಿಯಲ್ಲಿ ವಾಪಾಸು ಹೋಗುತ್ತೇನೆ. ದುರ್ಗಾಪರಮೇಶ್ವರಿಯ ಕಣ್ಣೀರು ಒರೆಸಿ ಕೂರಿಸಿದ್ದೇನೆ. ಅವರು ದುಃಖದಲ್ಲಿದ್ದರು ಹೋಗಿ ಅವರ ಪಾದ ಹಿಡಿಯುತ್ತೇನೆ. ಮುಂದಿನ ಭವಿಷ್ಯವನ್ನು ಒಳ್ಳೆದು ಮಾಡುತ್ತೇನೆ. ಯಾರಿಗೂ ಏನು ತೊಂದರೆಯಾಗಲ್ಲ ಎಂಬ ಭಾಷೆಯನ್ನು ಅವರಿಗೆ ನೀಡುತ್ತೇನೆ ಎಂದು ದೈವ ಅಭಯ ನುಡಿದಿದೆ.





