
ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರಿಂದ ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕ ವೃಂದದ ಹುದ್ದೆಗೆ ಬಡ್ತಿ ನೀಡಲು ಇದೇ ಮೊದಲ ಬಾರಿಗೆ ನಡೆಯುತ್ತಿರುವ ಅರ್ಹತಾ ಪರೀಕ್ಷೆಗೆ ದಿನಾಂಕ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ.
ಡಿ. 29ರಿಂದ ಜ. 28 ರ ವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು ಫೆಬ್ರವರಿ 12 ರಿಂದ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಬಹುದು. ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು 100 ಅಂಕಗಳಲ್ಲಿ ಕನಿಷ್ಠ 50 ಅಂಕ ಕಡ್ಡಾಯ.
ಫೆಬ್ರವರಿ 22ರಂದು ಎರಡು ಅವಧಿಯಲ್ಲಿ ಪರೀಕ್ಷೆ ನಡೆಯಲ್ಲಿದ್ದು ಮೊದಲ ಅವಧಿ ಬೆಳಗ್ಗೆ 9: 30ರಿಂದ ಮಧ್ಯಾಹ್ನ 12:00 ಮತ್ತು 2ನೇ ಅವಧಿ ಮಧ್ಯಾಹ್ನ 2 ರಿಂದ ಸಂಜೆ 4:30ರ ವರೆಗೆ ನಿಗದಿಪಡಿಸಲಾಗಿದೆ. ವಿವರಣಾತ್ಮಕ ಮಾದರಿಯಲ್ಲಿ ಪ್ರಶ್ನೆಪತ್ರಿಕೆ ಇರಲಿದ್ದು ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು ಮತ್ತು ಸಂಸ್ಕೃತ ಪರೀಕ್ಷೆ ಮೊದಲ ಅವಧಿಯಲ್ಲಿ ಹಾಗೂ ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಪರೀಕ್ಷೆಗಳು ಎರಡನೇ ಅವಧಿಯಲ್ಲಿ ನಡೆಯಲಿದೆ. ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಪ್ರಶ್ನೆಪತ್ರಿಕೆ ಇರಲಿದೆ.






















































