
ನವದೆಹಲಿ: 5 ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮೊದಲು ಘಾನಾ ದೇಶಕ್ಕೆ ಭೇಟಿ ನೀಡಿದ್ದು ಇದೀಗ ಅವರಿಗೆ ಅಲ್ಲಿನ ರಾಷ್ಟ್ರೀಯ ಗೌರವ `ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
30 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ನೀಡಿದ ಮೊದಲ ಭೇಟಿ ಇದಾಗಿದ್ದು ಈ ಸಂದರ್ಭದಲ್ಲಿ ಪ್ರಭಾವಶಾಲಿ ಜಾಗತಿಕ ನಾಯಕ ಎಂದು ಗುರುತಿಸಿ ಘಾನಾದ ಅಧ್ಯಕ್ಷ ಜಾನ್ ಡ್ರಾಮಣಿ ಮಹಾಮ ಅವರು ಮೋದಿಗೆ ರಾಷ್ಟ್ರೀಯ ಗೌರವ `ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ “ಈ ಗೌರವ ಕೇವಲ ವೈಯಕ್ತಿಕ ಶ್ರಮದಿಂದಲ್ಲ, ಇದು 140 ಕೋಟಿ ಭಾರತೀಯರ ಸಾಧನೆ. ಅವರ ಪರವಾಗಿ ನಾನು ಇದನ್ನು ಸ್ವೀಕರಿಸಿದ್ದೇನೆ. ಈ ಪ್ರಶಸ್ತಿಯನ್ನು ರಾಷ್ಟ್ರದ ಯುವಜನತೆಗೆ ಅರ್ಪಿಸುತ್ತೇನೆ ಹಾಗೂ ಇದು ಭಾರತದ ಶ್ರೀಮಂತ ಪರಂಪರೆಯನ್ನು ಎತ್ತಿತೋರಿಸುತ್ತದೆ” ಎಂದು ತಿಳಿಸಿದ್ದಾರೆ.
ಈ ಕುರಿತು ಮೋದಿಯವರು ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಘಾನಾದ ರಾಷ್ಟ್ರೀಯ ಪ್ರಶಸ್ತಿ `ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್’ ನೀಡಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.