
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ‘ಪಂಚ ಬೇಡಿಕೆ’ಯ ಪಟ್ಟಿಯೊಂದಿಗೆ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದು ತಕ್ಷಣ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಪಂಚ ಬೇಡಿಕೆಗಳು:
- ಮಳೆ ಹಾನಿ ಪರಿಹಾರವಾಗಿ 2,136 ಕೋಟಿ ರೂ. ತಕ್ಷಣ ಬಿಡುಗಡೆ
- ಬಾಕಿ ಇರುವ ನೀರಾವರಿ ಯೋಜನೆಗಳ ತೀರುವಳಿಗೆ ಮಧ್ಯಪ್ರವೇಶಿಸುವುದು.
- ಜಲಜೀವನ ಮಿಷನ್ ಯೋಜನೆಯ ಬಾಕಿ ಹಣ ಬಿಡುಗಡೆ
- ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕೂಡಲೇ ಅನುಮೋದನೆ ನೀಡುವುದು
- ಕಬ್ಬು ಬೆಳಗಾರರ ನೆರವಿಗೆ ಸಕ್ಕರೆ ಎಂ ಎಸ್ ಪಿ ಪರಿಷ್ಕರಿಸುವುದು.
ರಾಜ್ಯದ ಪ್ರಮುಖ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ, ಮೇಕೆದಾಟು ಸಮತೋಲಿತ ಅಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರದಿಂದ ಬಾಕಿ ಇರುವ ತೀರುವಳಿಗಳನ್ನು ದೊರಕಿಸಲು ಪ್ರಧಾನಿ ಮಧ್ಯ ಪ್ರವೇಶಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಈಗಾಗಲೇ ನೀಡಿರುವ ಭರವಸೆ ಪ್ರಕಾರ 5,300 ಕೋಟಿ ರೂ ಬಿಡುಗಡೆ ಮಾಡಿ ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ಅರಣ್ಯ ಮತ್ತು ವನ್ಯಜೀವಿ ಪರಿಸರ ಇಲಾಖೆಯ ವತಿಯಿಂದ ಅನುಮತಿ ಕೊಡಿಸಬೇಕು.
ಅಧಿಕ ಮಳೆಯಿಂದಾಗಿ 14.5 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದ್ದು 19 ಲಕ್ಷ ರೈತರಿಗೆ ನಷ್ಟ ಉಂಟಾಗಿದೆ. ಹೀಗಾಗಿ ಎನ್ ಡಿಆರ್ ಎಫ್ ವತಿಯಿಂದ ಪರಿಹಾರವನ್ನು ಕೋರಿ ಎರಡು ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಸಂಬಂಧಿಸಿದಂತೆ ಯೋಜನೆಗೆ ಅವಶ್ಯವಾದ ಭೂಮಿಯ ಲಭ್ಯತೆ, ಸಂಪರ್ಕ ವ್ಯವಸ್ಥೆ ಮತ್ತು ಸ್ಥಳೀಯ ಆಡಳಿತ ಬೆಂಬಲ ಸೇರಿದಂತೆ ಏಮ್ಸ್ ನಂತಹ ರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಜಿಲ್ಲೆಯಲ್ಲಿ ಸ್ಥಾಪಿಸಲು ಪೂರಕ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಕೇಂದ್ರ ತಕ್ಷಣ ಸ್ಪಂದಿಸುವಂತೆ ಒತ್ತಾಯಿಸಲಾಗಿದೆ.






