
ವಿಜಯಪುರ : ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯ ಮಾಜಿ ಸಂಸದ ಪ್ರತಾಪ ಸಿಂಹ ಅವರು ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುವ ವಿರುದ್ಧ ಕೋರ್ಟಿಗೆ ಹೋಗಿದ್ದನ್ನು ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿ ಮಾತನಾಡಿದ್ದು ಈ ವೇಳೆ ‘ರಾಜಕೀಯ ದುರುದ್ದೇಶದಿಂದ ಬಾನು ಮುಷ್ತಾಕ್ ಅವರು ನಾಡಹಬ್ಬ ಉದ್ಘಾಟಿಸುವುದನ್ನು ಬಿಜೆಪಿಯವರು ವಿರೋಧಿಸುತ್ತಿದ್ದಾರೆ. ಸರ್ಕಾರ ರಾಜಕೀಯವಾಗಿ ಉತ್ತರ ನೀಡುವ ಜತೆಗೆ ಕೋರ್ಟಿನಲ್ಲೂ ಪ್ರತ್ಯುತ್ತರ ನೀಡಲಿದೆ’ ಎಂದು ಹೇಳಿದರು.
‘ಈ ಹಿಂದೆ ಕವಿ ನಿಸಾರ್ ಅಹಮ್ಮದ್ ದಸರಾ ಉದ್ಘಾಟನೆಗೆ ಬಂದಾಗ ಏಕೆ ಕೋರ್ಟ್‌ಗೆ ಹೋಗಲಿಲ್ಲ? ಹೈದರಾಲಿ ಟಿಪ್ಪು, ಮಿರ್ಜಾ ಇಸ್ಮಾಯಿಲ್ ಮೆರವಣಿಗೆ ಮಾಡಿದಾಗ ಏಕೆ ವಿರೋಧ ಮಾಡಲಿಲ್ಲ?’ ಎಂದು ಪ್ರಶ್ನಿಸಿದ ಅವರು ‘ಅವರಿಗೆ ನಾವು ನ್ಯಾಯಾಲಯದಲ್ಲಿಯೇ ಉತ್ತರ ನೀಡುತ್ತೇವೆ’ ಎಂದು ಹೇಳಿದರು.
‘ಅವರು ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ. ನಾವು ಅದನ್ನು ನ್ಯಾಯಾಲಯದಲ್ಲೇ ಹೋರಾಟ ಮಾಡುತ್ತಿದ್ದೇವೆ. ಬಾನು ಮುಷ್ತಾಕ್ ಅವರು ಕನ್ನಡ ರೈಟರ್. ಕನ್ನಡದಲ್ಲೇ ಎದೆಯ ಹಣತೆ ಬರೆದಿದ್ದಾರೆ. ಅದಕ್ಕೆ ಬುಕರ್ ಅವಾರ್ಡ್ ಕೂಡ ಬಂದಿದೆ. ಬಾನು ಮುಷ್ತಾಕ್ ಕನ್ನಡ ಸಾಹಿತಿ ಆಗಿರುವುದರಿಂದ ದಸರಾ ಉದ್ಘಾಟಿಸಲಿದ್ದಾರೆ’ ಎಂದು ಸ್ಪಷ್ಟನೆ ನೀಡಿದರು.