
ಮಂಗಳೂರು: ಮಂಗಳೂರಿನ ಕುಳಾಯಿ ಚಿತ್ರಾಪುರ ಮಠದಲ್ಲಿ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಒಂದು ಕಡೆ ನಾವು ಜಾತ್ಯಾತೀತರು ಎನ್ನುವುದು. ಇನ್ನೊಂದು ಎಲ್ಲಾ ವಲಯದಲ್ಲೂ ಅದನ್ನ ಪೋಷಿಸುವುದು. ಜಾತಿ ವ್ಯವಸ್ಥೆಯನ್ನು ಅನಿಷ್ಟಗಳಿಗೆ ಮೂಲ ಎನ್ನುವವರೇ ಅದನ್ನು ಪೋಷಿಸುತ್ತಿದ್ದಾರೆ ಎಂದು ಪರಿಷತ್ ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ನಾವು ಹೇಳಿದ್ದು ತಪ್ಪಂತೆ. ಪುಡಿ ರಾಜಕಾರಣ ಮಾಡುತ್ತಿದ್ದೇವೆ ಎನ್ನುತ್ತಾರೆ. ಹಾಗಾದರೆ ಇದು ಪ್ರಜಾಪ್ರಭುತ್ವ ರಾಷ್ಟ್ರ ಹೌದೋ ಅಲ್ವೋ ಹೇಳಿ ಎಂದಿದ್ದಾರೆ. ಹೌದು ಅಂತಾದ್ರೆ ಒಬ್ಬ ಮಾಠಾಧಿಪತಿಗೆ ಅಂತಲ್ಲ, ಸಾಮಾನ್ಯ ಪ್ರಜೆಗೂ ಮಾತಾಡುವ ಹಕ್ಕಿದೆ. ಹೀಗಿರುವಾಗ ಕಾವಿ ತೆಗೆದಿಟ್ಟು ಬಂದರೆ ಉತ್ತರ ಕೊಡುತ್ತೇನೆ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
ಸಮಾಜದಲ್ಲಿ ಮಾತನಾಡುವ ಹಕ್ಕು ಇರುವುದು ಕೆಲವು ರಾಜಕಾರಣಿಗಳಿಗೆ ಮಾತ್ರವೇ? ಪ್ರಜೆಗಳಿಗೂ ಹಕ್ಕಿಲ್ಲ, ರಾಜಕಾರಣಿಗಳಿಗೆ ಮಾತ್ರ ಹಕ್ಕಿದೆ ಅಂತ ಹೇಳಲಿ. ಪ್ರಜಾಪ್ರಭುತ್ವ ಸತ್ತು ಹೋಯ್ತು, ಈಗ ಇರೋದು ರಾಜಕಾರಣಿಗಳ ರಾಜ್ಯ ಅಂತ ಹೇಳಿ ಬಿಡಲಿ. ಹಾಗಿಲ್ಲ ಅಂತಾದ್ರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪೀಠಾಧಿಪತಿ ಮಾತ್ರ ಅಲ್ಲ, ಸಾಮಾನ್ಯ ಪ್ರಜೆಗೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿರಲೇಬೇಕು. ಹಾಗಾಗಿ ನಾವು ಅದನ್ನ ಮಾತ್ರ ಮಾಡಿದ್ದೇವೆಯೇ ಹೊರತು ಬೇರೆ ಮಾಡಿಲ್ಲ ಎಂದು ಕಿಡಿಕಾರಿದರು.


ಘಟನೆ ಹಿನ್ನೆಲೆ:
ಪೇಜಾವರ ಶ್ರೀ ಅವರು ಜಾತಿಗಣತಿ ವಿಚಾರದ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿ ಸರ್ಕಾರ ಹಣ ಖರ್ಚು ಮಾಡಿ ಜಾತಿ ಜನಗಣತಿ ಮಾಡಿ ಮುಚ್ಚಿಟ್ಟಿದೆ. ಜಾತ್ಯಾತೀತವಾಗಿರುವ ರಾಷ್ಟ್ರದಲ್ಲಿ ಜಾತಿ ಗಣತಿ ಯಾಕೆ ಬೇಕು ಎಂದಿದ್ದ ಅವರು ಒಂದು ಕಡೆ ಜಾತಿ ಆಧಾರದಲ್ಲಿ ರಾಜಕೀಯ ಬೇಡ ಎನ್ನುತ್ತೀರಿ. ಇನ್ನೊಂದು ಕಡೆ ಜಾತಿಗಣತಿ ಎನ್ನುತ್ತೀರಿ. ಈ ಜಾತಿ ಗಣತಿ ಯಾಕೆ ಎನ್ನುವುದು ತಿಳಿಯುತ್ತಿಲ್ಲ ಎಂದು ಹೇಳಿದ್ದರು.
ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಹರಿಪ್ರಸಾದ್, ಪೇಜಾವರ ಸ್ವಾಮೀಜಿ ಅವರು ಪುಡಿ ರಾಜಕಾರಣಿಗಳಂತೆ ಹೇಳಿಕೆ ನೀಡುತ್ತಿದ್ದಾರೆ. ಪೇಜಾವರ ಸ್ವಾಮೀಜಿ ಅವರು ಕಾವಿ ಬಟ್ಟೆ ತ್ಯಜಿಸಿ ಬಂದರೆ ಅವರಿಗೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದರು.







