ಸಾರ್ವಜನಿಕರ ಹಾಗೂ ಪೊಲೀಸರ ನೆರವಿನಿಂದ ಮತ್ತೆ ಪೋಷಕರ ಕೈ ಸೇರಿದ ಮಕ್ಕಳು

ಬೆಂಗಳೂರು: ಟ್ಯೂಷನ್‌ಗೆ ಹೋಗಲಿಲ್ಲ ಎಂದು ಪೋಷಕರು ಬೈದ ಕಾರಣ ಕೋಪಗೊಂಡ 13 ವರ್ಷದ ಬಾಲಕಿ ತನ್ನ 9 ವರ್ಷದ ತಮ್ಮನೊಂದಿಗೆ ಮನೆಬಿಟ್ಟು ಹೊರಟು ಸರ್ಕಾರಿ ಉಚಿತ ಬಸ್‌ಗಳಲ್ಲಿ ಊರೂರು ಸುತ್ತಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಾರತ್ತಹಳ್ಳಿಯ ಅಶ್ವತ್ಥನಗರದಿಂದ ಹೊರಟ ಮಕ್ಕಳು ಶಿವಮೊಗ್ಗ ಮತ್ತು ಚಿತ್ರದುರ್ಗವರೆಗೆ ಪ್ರಯಾಣಿಸಿದ್ದಾರೆ.
ಬಾಲಕಿಗೆ ಆಧಾರ್ ಕಾರ್ಡ್ ಇದ್ದ ಕಾರಣ ಉಚಿತ ಪ್ರಯಾಣ ಸೌಲಭ್ಯ ಲಭಿಸಿದ್ದರೆ, ತಮ್ಮನನ್ನು ಟಿಕೆಟ್ ಇಲ್ಲದೆ ಕರೆದುಕೊಂಡು ಹೋಗಿದ್ದಾಳೆ. ಮಕ್ಕಳು ಕಾಣೆಯಾಗಿರುವುದಾಗಿ ಪೋಷಕರು HAL ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದಾಗ ಭದ್ರಾವತಿಯಲ್ಲಿ ಸಾರ್ವಜನಿಕರ ಗಮನಕ್ಕೆ ಮಕ್ಕಳು ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಮಾಹಿತಿಯನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸಾರ್ವಜನಿಕರ ಸಹಕಾರದಿಂದ ಮಕ್ಕಳು ಪತ್ತೆಯಾಗಿದ್ದು, ಪೊಲೀಸರ ನೆರವಿನಿಂದ ಸುರಕ್ಷಿತವಾಗಿ ಹೆತ್ತವರ ವಶಕ್ಕೆ ಒಪ್ಪಿಸಲಾಯಿತು.



















