
ಬೆಂಗಳೂರು: ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಬೆಳಗಾವಿಯ ಬಾಳೆ ಕುಂದ್ರಿ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸಲಾಗಿದೆ. ಇದೀಗ ನಿರ್ವಾಹಕನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಪುಂಡಾಟಿಕೆ ಮಾಡುವವರನ್ನು ಗಡಿಪಾರು ಮಾಡುವಂತೆ ಗೃಹ ಸಚಿವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ನಮ್ಮ ನಾಡಿನ ನೆಲ, ಜಲ, ಭಾಷೆ ವಿಚಾರ ಬಂದಾಗ ಪಕ್ಷಾತೀತವಾಗಿ ಎಲ್ಲರೂ ಖಂಡಿಸಬೇಕು. ನಿರ್ವಾಹಕರು ಮರಾಠಿಯಲ್ಲಿ ಮಾತನಾಡಬೇಕೆಂಬುದು ಸರಿಯಲ್ಲ. ಹುಡುಗರ ಬಳಿಯೂ ಶೂನ್ಯದರದ ಟಿಕೆಟ್ ಇದ್ದುದನ್ನು ಪ್ರಶ್ನಿಸಿದಾಗ ಮರಾಠಿಯಲ್ಲಿ ಮಾತನಾಡುವಂತೆ ಜಗಳ ಶುರುವಾಗಿದ್ದು ಬಳಿಕ ಎರಡು ಮೂರು ಜನ ಸೇರಿ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಸಾರ್ವಜನಿಕರು ನಿರ್ವಾಹಕನ ಪರ ನಿಂತಿದ್ದು ಪೊಲೀಸರು ದೂರು ದಾಖಲಿಸಿಕೊಂಡು ಹಲ್ಲೆ ಮಾಡಿದವರನ್ನು ಬಂಧಿಸಿ ಜೈಲಿಗೆ ಕಳುಹಿಸಿದಾಗ ಆಕೆ ನಿರ್ವಾಹಕನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿರಬಹುದು. ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದು ಕಾನೂನುಬಾಹಿರಾ ಕೃತ್ಯವಾಗಿದೆ. ಇದರ ವಿರುದ್ಧ ಕ್ರಮ ಕೈಗೊಂಡದ್ದಕ್ಕೆ ಅವರು ಬೇಕೆಂದೇ ಸುಳ್ಳು ಪೋಕ್ಸೋ ದೂರು ಕೊಟ್ಟಿದ್ದಾರೆ. ಈ ಕುರಿತು ಗೃಹ ಸಚಿವರು ಹಾಗೂ ಡಿಜಿ ಜೊತೆಗೆ ಮಾತುಕತೆ ಮಾಡುತ್ತೇನೆ ಎಂದು ಹೇಳಿದ್ದಾರೆ.











