
ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22ನೇ ಕಂತಿನ ಹಣ ಇತ್ತೀಚೆಗೆ ಹೊರಬಂದ ಮಾಹಿತಿಯಂತೆ, ಮಾರ್ಚ್ 13ರಂದು ರೈತರ ಖಾತೆಗೆ ಜಮೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರದಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.
ಕೆಲವು ರೈತರು ಅಗತ್ಯ ಕ್ರಮಗಳನ್ನು ಪೂರ್ಣಗೊಳಿಸದಿದ್ದರೆ ಈ ಬಾರಿ ಕಂತಿನ ಹಣ ಪಡೆಯಲು ಸಾಧ್ಯವಾಗದೇ ಹೋಗಬಹುದು. ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದಿರುವುದು, ಭೂ ದಾಖಲೆಗಳ ಪರಿಶೀಲನೆ ಮುಗಿಯದೇ ಇರುವಿಕೆ, ಬ್ಯಾಂಕ್ ಖಾತೆ ವಿವರಗಳು ಅಥವಾ ಐಎಫ್‌ಎಸ್‌ಸಿ ಕೋಡ್ ತಪ್ಪಾಗಿರುವುದು, ಹಾಗೂ ಅರ್ಜಿಯಲ್ಲಿ ಹೆಸರು ಅಥವಾ ಆಧಾರ್ ಸಂಖ್ಯೆ ತಪ್ಪಾಗಿರುವುದು ಪ್ರಮುಖ ಕಾರಣಗಳಾಗಿವೆ.
ಇನ್ನೂ ಕೆಲವು ರಾಜ್ಯಗಳಲ್ಲಿ ಪಿಎಂ ಕಿಸಾನ್ ಯೋಜನೆಯ ಪ್ರಯೋಜನ ಪಡೆಯಲು ‘ಫಾರ್ಮರ್ ಐಡಿ’ ಕಡ್ಡಾಯವಾಗಿದೆ. ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಅಗ್ರಿಸ್ಟಾಕ್ ಯೋಜನೆಯಡಿ ರೈತರಿಗೆ ಈ ಐಡಿ ನೀಡಲು ವಿಶೇಷ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಫಾರ್ಮರ್ ಐಡಿ ಮಾಡಿಸದ ರೈತರಿಗೆ ಹಣ ಪಡೆಯುವಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.






