
ಉಡುಪಿ: ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಂಸದರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿ 169ಎ ಪರ್ಕಳದಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲು ವಿಳಂಬವಾಗಿದ್ದು ತಕ್ಷಣವೇ ಇದನ್ನು ಸರಿಪಡಿಸಿ ತುರ್ತಾಗಿ ಕಾಮಗಾರಿ ಆರಂಭಿಸುವಂತೆ ಅಧಿಕಾರಿ ಹಾಗೂ ಇಂಜಿನಿಯರ್ ಗಳಿಗೆ ಸೂಚಿಸಿದ್ದಾರೆ.
11 ಮಂದಿ ಸಂತ್ರಸ್ತರಿಗೆ ಅವರ ಹೆಸರಿನಲ್ಲಿ ಪ್ರತ್ಯೇಕವಾಗಿ ಪರಿಹಾರದ ಚೆಕ್ ನೀಡಬೇಕಿತ್ತು, ಆದರೆ ಅಧಿಕಾರಿಯೊಬ್ಬರು ಒಂದೇ ಚೆಕ್ ನಲ್ಲಿ ನೀಡಿದ್ದರಿಂದ ಸಮಸ್ಯೆಯಾಗಿದ್ದು ಹೀಗಾಗಿ ಕೂಡಲೇ 11 ಚೆಕ್ ಸಿದ್ಧಪಡಿಸಿ ಅದನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಕಾಮಗಾರಿ ಆರಂಭಿಸಬೇಕು ಎಂದು ಹೇಳಿದರು.
ಆಗುಂಬೆಯಿಂದ ಹೆಬ್ರಿಯವರೆಗೆ 22km ಕಾಮಗಾರಿ ಸಂಬಂಧ ಅರಣ್ಯ ಇಲಾಖೆಯ ಒಪ್ಪಿಗೆ, ಮರ ತೆರವು ಇತ್ಯಾದಿಗೆ ಪ್ರತ್ಯೇಕ ಡಿಪಿಆರ್ ಕೂಡಲೇ ಮಾಡಿ ಡಿಪಿಆರ್ ಆದ ಮೇಲೆ ಅದರ ಆಧಾರದಲ್ಲಿ ಕಾಮಗಾರಿ ಆರಂಭಿಸಬೇಕು. ಮಲ್ಪೆ-ಆದಿಉಡುಪಿ ಕಾಮಗಾರಿ ಸಂಬಂಧ ಸ್ಥಳೀಯರ ಮನವೊಲಿಸಿ, ಆದಷ್ಟು ಬೇಗ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಈ ಕುರಿತು ಮಾತನಾಡಿದ ಅಧಿಕಾರಿಗಳು ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ಬಹುಪಾಲು ಪೂರ್ಣಗೊಂಡಿದ್ದು ಈಗ ಜೋಡಣೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ರೈಲ್ವೆ ಸುರಕ್ಷಾ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಈ ಸೇತುವೆ ಜೋಡಣೆಗೆ ಬೇಕಾದ ಅಗತ್ಯ ಉಪಕರಣಗಳನ್ನು ನೈರುತ್ಯ ರೈಲ್ವೆ ವಿಭಾಗದಿಂದಲೂ ಒದಗಿಸಿದ್ದು ಏಪ್ರಿಲ್ ನಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.