
ಮಂಡ್ಯ: ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್‌ಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹೋಗುತ್ತಿದ್ದು ಆದರೆ ಸದ್ಯ ಕೆಆರ್‌ಎಸ್ ಡ್ಯಾಂನಲ್ಲಿ ಒಳಹರಿವು ಹಾಗೂ ಹೊರಹರಿವು ಹೆಚ್ಚಾಗಿರುವ ಕಾರಣ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಇದರಿಂದಾಗಿ ಬೋಟಿಂಗ್ ರದ್ದು ಮಾಡಲಾಗಿದೆ. ಹೀಗಾಗಿ ದೂರದಲ್ಲೇ ನಿಂತು ಪಕ್ಷಿ ನೋಡಿ ಪ್ರವಾಸಿಗರು ವಾಪಸ್ ಹೋಗುತ್ತಿದ್ದಾರೆ.
ಹೊರಹರಿವು ಮತ್ತಷ್ಟು ಹೆಚ್ಚಾದರೆ ಪಕ್ಷಿ ಸಂಕುಲಕ್ಕೂ ಎಫೆಕ್ಟ್ ಆಗುವ ಸಾಧ್ಯತೆಯಿದೆ. ಈಗಾಗಲೇ ನದಿ ಮಧ್ಯೆ ಇರುವ ನಡುಗಡ್ಡೆಗಳು ಅರ್ಧದಷ್ಟು ಮುಳುಗಡೆಯಾಗಿವೆ. ಒಂದು ಲಕ್ಷ ಕ್ಯೂಸೆಕ್‌ಗೆ ಹೊರಹರಿವು ಏರಿಕೆಯಾದರೆ ಭಾಗಶಃ ನಡುಗಡ್ಡೆಗಳು ಮುಳುಗುವ ಭೀತಿ ಶುರುವಾಗಿದೆ. ಆ ಸಮಯದಲ್ಲಿ ಪಕ್ಷಿಗಳ ಗೂಡು, ಮೊಟ್ಟೆಗಳು ಕೊಚ್ಚಿ ಹೋಗುವ ಆತಂಕ ಸೃಷ್ಟಿಯಾಗಿದೆ.









