
ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಬಿಜೆಪಿ ಕಾರ್ಯಕರ್ತರು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಕಪ್ಪು ಬಾವುಟ ತೋರಿಸಿ ಗದ್ದಲ ಎಬ್ಬಿಸಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ “ನಿಮ್ಮ ಪ್ರವೃತ್ತಿ ಇದೇ ರೀತಿ ಮುಂದುವರಿದರೆ ರಾಜ್ಯದ ಎಲ್ಲಿಯೂ ನಿಮ್ಮ ಒಂದೇ ಒಂದು ಕಾರ್ಯಕ್ರಮ ನಡೆಯಲು ಬಿಡುವುದಿಲ್ಲ. ಇದು ಕಾಂಗ್ರೆಸ್ ಪ್ರತಿಜ್ಞೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಾ ಬಂದಿದ್ದು ಆದರೆ ಬೆಳಗಾವಿಯಲ್ಲಿ ಬಿಜೆಪಿಯ ಕೆಲವು ಕಾರ್ಯಕರ್ತೆಯರು ನಮ್ಮ ಪಕ್ಷದ ಕಾರ್ಡ್ ಪಡೆದುಕೊಂಡು ಬಂದು ಪ್ರತಿಭಟನೆ ಮಾಡಿದ್ದಾರೆ.
ಇದನ್ನು ನಾವು ಹಗುರವಾಗಿ ಪರಿಗಣಿಸುವುದಿಲ್ಲ. ಬಿಜೆಪಿ ನಾಯಕರು ತಮ್ಮ ಪ್ರವೃತ್ತಿಯನ್ನು ಬದಲಿಸಿಕೊಳ್ಳಬೇಕು. ನಿಮಗಿಂತ ಹೆಚ್ಚಿನ ರೀತಿಯ ಪ್ರತಿಭಟನೆ ಮಾಡುವ ಶಕ್ತಿಯನ್ನು ರಾಜ್ಯದ ಜನರು ನಮಗೆ ನೀಡಿದ್ದಾರೆ. ಆದ್ದರಿಂದ ನಿಮ್ಮ ಕಾರ್ಯಕರ್ತರಿಗೆ ಬುದ್ಧಿವಾದ ಹೇಳಿದರೆ ಒಳ್ಳೆಯದು. ಇಲ್ಲದಿದ್ದರೆ ನಾವು ಕೂಡ ಪ್ರತಿ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.



















