
ಕೇಂದ್ರ ಸರ್ಕಾರವು ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು 100 ಮಿಗ್ರಾಂಗಿಂತ ಹೆಚ್ಚು ನಿಮೆಸುಲೈಡ್ ಹೊಂದಿರುವ ಓರಲ್ ನಿಮೆಸುಲೈಡ್ ಮಾತ್ರೆಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧ ಮಾಡಿ ಆದೇಶ ಹೊರಡಿಸಿದೆ.
ಆರೋಗ್ಯ ಸಚಿವಾಲಯದ ಅಧಿಸೂಚನೆಯ ಪ್ರಕಾರ, 100 ಮಿಗ್ರಾಂಗಿಂತ ಹೆಚ್ಚಿನ ಪ್ರಮಾಣವನ್ನು ಹೊಂದಿರುವ ನಿಮೆಸುಲೈಡ್ ಮನುಷ್ಯರಿಗೆ ಅಪಾಯ ಉಂಟುಮಾಡಬಹುದು. ಇದು ಸ್ಟೀರಾಯ್ಡ್ ಅಲ್ಲದ ಉರಿಯೂತದ ಔಷಧವಾಗಿದ್ದು ಇದು ಲಿವರ್ ಮೇಲೆ ಹಾಗೂ ಇತರ ಅಂಗಗಳ ಮೇಲೆ ಅಡ್ಡಪರಿಣಾಮ ಬೀರುವ ಬಗ್ಗೆ ವಿಶ್ವಾದ್ಯಂತ ತನಿಖೆ ಮಾಡಲಾಗುತ್ತಿದೆ. ಕಡಿಮೆ-ಡೋಸ್ ಇರುವ ಮತ್ತು ಇತರ ಸುರಕ್ಷಿತ ಪರ್ಯಾಯಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ಸರ್ಕಾರ ಹೇಳಿದ್ದು 1940 ರ ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆಯ ಸೆಕ್ಷನ್ 26A ಅಡಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ನೋವು, ಸಂಧಿವಾತದಂತಹ ಸಮಸ್ಯೆ, ಊತ ಮತ್ತು ಉರಿಯೂತವನ್ನು ಕಡಿಮೆ ಮಾಡಲು ನಿಮೆಸುಲೈಡ್ ಬಳಸುತ್ತಿದ್ದು ಶಸ್ತ್ರಚಿಕಿತ್ಸೆ, ಹಲ್ಲು ನೋವು, ಸೌಮ್ಯವಾದ ಉಳುಕು ಮತ್ತು ಕಿವಿ, ಮೂಗು ಮತ್ತು ಗಂಟಲಿನ ನೋವನ್ನು ಕೂಡ ಕಡಿಮೆ ಮಾಡುತ್ತದೆ. ನಿಮೆಸುಲೈಡ್ ಮಾತ್ರೆಗಳು, ಸಿರಪ್, ಕ್ಯಾಪ್ಸುಲ್ಗಳು, ಟ್ಯಾಬ್ಲೆಟ್ ಡಿಟಿ, ಟ್ಯಾಬ್ಲೆಟ್ ಎಂಡಿ, ಚುಚ್ಚುಮದ್ದುಗಳು, ಮೌಖಿಕ ಹನಿಗಳು, ದ್ರಾವಣಗಳು ಮತ್ತು ಜೆಲ್ ಸೇರಿದಂತೆ ವಿವಿಧ ರೂಪಗಳಲ್ಲಿ ಲಭ್ಯವಿದ್ದು ಸಾಮಾನ್ಯವಾಗಿ ಈ ಮಾತ್ರೆಗಳನ್ನು ಸೇವನೆ ಮಾಡಿದಾಗ ಗ್ಯಾಸ್, ಹುಳಿ ತೇಗು, ತಲೆತಿರುಗುವಿಕೆ, ಹೊಟ್ಟೆ ನೋವು, ಚರ್ಮದ ಸೋಂಕು, ವಾಕರಿಕೆ ಮತ್ತು ವಾಂತಿ, ಅತಿಸಾರ, ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಗಳು ಬರುತ್ತವೆ.





