
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನ ಸಂಬಂಧಿಸಿದ ಚರ್ಚೆಗಳು ಮತ್ತೆ ಚುರುಕುಗೊಂಡಿರುವ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದ ಶಕ್ತಿಸೌಧದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ ನಾಯಕತ್ವ ವಿಚಾರದಲ್ಲಿ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಅದರಂತೆ ನಾನು, ಡಿ.ಕೆ.ಶಿವಕುಮಾರ್ ನಡೆದುಕೊಳ್ಳುತ್ತೇವೆ. ಮತ್ತೆ ಮತ್ತೆ ಇದರ ಬಗ್ಗೆಯೇ ಕೇಳಬೇಡಿ ಎಂದು ಹೇಳಿದ್ದಾರೆ.
ಮೂರು ತಿಂಗಳಿಂದ ಬರೀ ಇದೇ ಆಯಿತು. ಬೇರೆ ಏನೂ ಇಲ್ವಾ ಕೇಳೋಕೆ? ಕೇಳಿದ ಪ್ರಶ್ನೆಯನ್ನೇ ಪದೇ ಪದೆ ಕೇಳಬಾರದು. ಹೈಕಮಾಂಡ್ ತೀರ್ಮಾನವೇ ಅಂತಿಮ.
ಜತೆಗೆ, ಹೈಕಮಾಂಡ್‌ನವರಿಗೆ ಎಲ್ಲವೂ ಗೊತ್ತಿದೆ. ಅವರು ತೀರ್ಮಾನ ಮಾಡುತ್ತಾರೆ. ಅದರಂತೆ ನಾನೂ ನಡೆಯುತ್ತೇನೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ನಡೆದುಕೊಳ್ಳುತ್ತಾರೆ. ಇದನ್ನು ಈಗಾಗಲೇ ನಾನು ಹಲವು ಬಾರಿ ಹೇಳಿದ್ದೇನೆ. ಮತ್ತೆ ಈ ಪ್ರಶ್ನೆ ಕೇಳಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.



















