
ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲೂಕಿನ ಹದಿನಾರು ಗ್ರಾಮದಲ್ಲಿ ಮೈಸೂರು ಜಿಲ್ಲಾಡಳಿತ ಮತ್ತು ಜಿಪಂ ವತಿಯಿಂದ ಏರ್ಪಡಿಸಿದ್ದ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1,108 ಕೋಟಿ ಮೌಲ್ಯದ ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ, ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದು ಈ ವೇಳೆ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾಗಿದ್ದ ಜಿಎಸ್.ಟಿ ತೆರಿಗೆ ಪಾಲನ್ನು ನೀಡುವಲ್ಲಿ ಅನ್ಯಾಯವೆಸಗುತ್ತಿದೆ, ಬಜೆಟ್ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವುದಾಗಿ ಹೇಳಿ ಒಂದು ಬಿಡುಗಾಸನ್ನು ಬಿಡುಗಡೆ ಮಾಡಿಲ್ಲ, ನಾನು ಹೇಳುವುದು ನೂರಕ್ಕೆ ನೂರು ಸತ್ಯ, ನಾನು ಹೇಳುವುದು ಸುಳ್ಳು ಎಂದು ಆರೋಪಿಸುವ ಬಿಜೆಪಿ ನಾಯಕರು ಒಂದೇ ವೇದಿಕೆಗೆ ಚರ್ಚೆಗೆ ಬರಲಿ ಎಂದು ಸವಾಲೆಸೆದಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯದ ಪಾಲನ್ನ ಸರಿಯಾಗಿ ವಿತರಣೆ ಮಾಡುತ್ತಿಲ್ಲ, 14ನೇ ಹಣಕಾಸು ಯೋಜನೆಯಲ್ಲಿ ಶೇ. 4.7 ರಷ್ಟು ತೆರಿಗೆ ಪಾಲು ನೀಡಲಾಗಿತ್ತು, 15ನೇ ಹಣಕಾಸು ಯೋಜನೆಯಲ್ಲಿ ಶೇ 3.6 ಕ್ಕೆ ಇಳಿದಿದೆ, ಅಲ್ಲದೆ 5,495 ಕೋಟಿ ವಿಶೇಷ ಅನುದಾನ, ಕೆರೆ ಅಭಿವೃದ್ಧಿ ಮತ್ತು ಪೆರಿಫೆರಿ ರಸ್ತೆ ನಿರ್ಮಾಣಕ್ಕೆ 6 ಸಾವಿರ ಕೋಟಿ ಸೇರಿದಂತೆ 11,495 ಕೋಟಿ ರು.ಗಳನ್ನು ರಾಜ್ಯಕ್ಕೆ ಕೊಡಬೇಕಿತ್ತು, ಅಲ್ಲದೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರು. ಗಳನ್ನು ಘೋಷಿಸಿ ಇಂದಿಗೂ ಒಂದು ಬಿಡುಗಾಸನ್ನು ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯವ್ಯೆಸಗುತ್ತಿದ್ದರೂ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ನರೇಂದ್ರ ಮೋದಿ ಅವರನ್ನು ನ್ಯಾಯ ಕೇಳುವ ಧೈರ್ಯ ಮಾಡುತ್ತಿಲ್ಲ, ಅವರು ನ್ಯಾಯ ಕೇಳದಿದ್ದರೆ ಕರ್ನಾಟಕದ ಜನತೆಗೆ ಮಾಡುವ ದ್ರೋಹವಾಗಿದೆ. ಕೇಂದ್ರ ಸರ್ಕಾರ ತೆರಿಗೆ ಪಾಲನ್ನು ನೀಡುತ್ತಿದೆ ಎಂದು ಆರೋಪಿಸುವ ಬಿಜೆಪಿ ನಾಯಕರನ್ನು ಒಂದೇ ವೇದಿಕೆಗೆ ನಾನು ಅನೇಕ ಸಾರಿ ಚರ್ಚೆಗೆ ಕರೆದಿದ್ದೇನೆ, ಆದರೂ ನನ್ನ ಆಹ್ವಾನವನ್ನು ಅವರು ಸ್ವೀಕರಿಸಿಲ್ಲ. ನಾನು ಹೇಳುವುದು ನೂರಕ್ಕೆ ನೂರು ಸತ್ಯ, ಸುಳ್ಳು ಎನ್ನುವ ಬಿಜೆಪಿಗರು ಈಗಲೂ ಒಂದೇ ವೇದಿಕೆಗೆ ಚರ್ಚೆಗೆ ಬರಲಿ ಎಂದು ಪಂಥಾಹ್ವಾನ ನೀಡಿದರು.