
ದಾವಣಗೆರೆ: ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿಯಲ್ಲಿ ನಾನೂ ಸಿಎಂ ಅಭ್ಯರ್ಥಿ. ಅದೇ ರೀತಿ ರಾಜ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿದ್ದೇನೆ. ನಾನು ಬೇರೆಯವರಂತೆ ಲೂಟಿ ಮಾಡಿಲ್ಲ. ನಮ್ಮದು ಭ್ರಷ್ಟಾಚಾರದ ವಿರುದ್ಧ ಹಾಗೂ ಕುಟುಂಬ ರಾಜಕಾರಣ ವಿರುದ್ಧದ ಹೋರಾಟ ಎಂದು ಹೇಳಿದ್ದಾರೆ.
ದಾವಣಗೆರೆ, ತುಮಕೂರು, ಬೀದರ್‌ನಲ್ಲಿ ಒಳಒಪ್ಪಂದ ಮಾಡಿಕೊಂಡವರಿಗೆ ತಕ್ಕ ಶಾಸ್ತಿಯಾಗಬೇಕು. ದಾವಣಗೆರೆಯಲ್ಲಿ ಎರಡು ಹಂದಿಗಳಿದ್ದು, ಬೆಂಗಳೂರಿನ ಶಿವಾನಂದ ಸರ್ಕಲ್‌ನಲ್ಲಿ ವಿಜಯೇಂದ್ರ ಮನೆ ಮುಂದೆ ನೀವು ನಿಲ್ಲಿ. ಅಲ್ಲಿ ವಿಜಯೇಂದ್ರ ಗುಣಗಾನ ಮಾಡಿ ಎಂದು ಮಾಧ್ಯಮಗಳ ಮೇಲೆ ಯತ್ನಾಳ್ ಕಿಡಿಕಾರಿದರು.
ದೆಹಲಿಯಲ್ಲಿ ಯತ್ನಾಳ್‌ಗೆ ಅಪಮಾನ ಖಚಿತ, ರಾಷ್ಟ್ರೀಯ ನಾಯಕರು ಭೇಟಿಯಾಗಿಲ್ಲ ಎಂದು ಮಾಧ್ಯಮಗಳಲ್ಲಿ ವರದಿ ಮಾಡುತ್ತಾರೆ. ನಾವು ದೆಹಲಿಗೆ ಹೋಗುವುದು ನಿಶ್ಚಿತ. ದಾವಣಗೆರೆ ಜಿಎಂಐಟಿ ಗೆಸ್ಟ್ ಹೌಸ್‌ನಲ್ಲಿ ಯಾವುದೇ ಸಭೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ವಿಪಕ್ಷ ನಾಯಕನಾಗಿ ಆರ್.ಅಶೋಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮೆಚ್ಚುಗೆ ವ್ಯಕ್ತಪಡಿಸಿದರು.