
ಹೈದರಾಬಾದ್: ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ‘ಗುಲ್ಟೆ ಪ್ರೊ’ ಜೊತೆಗಿನ ಸಂದರ್ಶನವೊಂದರಲ್ಲಿ ಮಾತನಾಡಿ ತಾಯ್ತನ, ವೃತ್ತಿ ಜೀವನ ಸಮತೋಲನ ಮತ್ತು ವೈಯಕ್ತಿಕ ಯೋಗ ಕ್ಷೇಮದ ಕುರಿತು ಮಾತನಾಡಿದ್ದಾರೆ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತನ್ನ ವೃತ್ತಿ ಬದುಕಿನ ಕುರಿತು ಮಾತನಾಡುತ್ತಾ ‘ನಾನು ಹೆಚ್ಚು ಕೆಲಸ ಮಾಡುತ್ತೇನೆ. ನಾನು ನಿಮಗೆ ಹೇಳುತ್ತಿದ್ದೇನೆ, ಹಾಗೆ ಮಾಡಬೇಡಿ; ಅದು ಹೆಚ್ಚು ಒಳಿತಲ್ಲ. ನಿಮಗೆ ಸರಿಯಾದದ್ದನ್ನು ಮಾಡಿ. ಆದರೆ ನಿಮ್ಮ ಮಿತಿಗಳನ್ನು ತಿಳಿದುಕೊಳ್ಳಿ. ನಟರು ಮಾತ್ರವಲ್ಲ ತಂತ್ರಜ್ಞರು ಮತ್ತು ಇಡೀ ತಂಡಗಳು ಆ ಬ್ಯಾಲೆನ್ಸ್ ಮಾಡಿಕೊಂಡು ಹೋಗುವುದನ್ನು ಕಲಿಯಬೇಕು’ ಎಂದಿದ್ದಾರೆ.
ನಾನು ಕುಟುಂಬದ ಮೇಲೆ ಗಮನಹರಿಸಬೇಕು, ಸಾಕಷ್ಟು ನಿದ್ದೆ ಮಾಡಬೇಕು, ವ್ಯಾಯಾಮ ಮಾಡಲು ಸಮಯ ಮಾಡಿಕೊಳ್ಳಬೇಕು. ಇದರಿಂದ ನಂತರದ ದಿನಗಳಲ್ಲಿ ನಾನು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎಂದು ರಶ್ಮಿಕಾ ಹೇಳಿದ್ದಾರೆ.
‘ದಿ ಗರ್ಲ್ ಫ್ರೆಂಡ್’ ಚಿತ್ರದ ನಿರ್ದೇಶಕ ರಾಹುಲ್ ರವಿಚಂದ್ರನ್ ಕೂಡ ಈ ಸಂದರ್ಶನದಲ್ಲಿ ಭಾಗಿಯಾಗಿದ್ದು ಅವರು ‘ನಾನು ಸಾಮಾನ್ಯವಾಗಿ ಸುರಕ್ಷಿತ ವ್ಯಕ್ತಿ. ಆದರೆ ನನಗೆ ಈ ಒಂದು ಅಭದ್ರತೆ ಕಾಡುತ್ತಿದೆ. ನನ್ನ ಮಕ್ಕಳನ್ನು ನೋಡಿದಾಗ ಅವರು ದೊಡ್ಡವರಾಗಿ ಸ್ವತಃ ಜಗತ್ತನ್ನು ನೋಡುವಷ್ಟು ಬೆಳೆಯುವವರೆಗೂ ನಾನು ಜೀವಂತವಾಗಿರಬೇಕು ಎಂದು ಬಯಸುತ್ತೇನೆ. ಅದನ್ನು ಗಮನದಲ್ಲಿಟ್ಟುಕೊಂಡು ನಾನು ಈಗ ಎಚ್ಚರಿಕೆಯಿಂದ ನಡೆಯುತ್ತಿದ್ದೇನೆ ಎಂದು ಹೇಳಿದ್ದು ಇದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕ ‘ನಾನು ಇನ್ನೂ ತಾಯಿ ಆಗಿಲ್ಲ. ಆದರೆ ನನಗೆ ಮಕ್ಕಳನ್ನು ಹೊಂದಿರುವ ಭಾಸವಾಗುತ್ತಿದೆ. ಇನ್ನು ಜನಿಸದ ಪುಟ್ಟ ಮಕ್ಕಳ ಮೇಲೆ ನನಗೆ ಆಳವಾದ ಭಾವನೆ ಇದೆ. ನಾನು ಅವರನ್ನು ರಕ್ಷಿಸಲು ಬಯಸುತ್ತೇನೆ’ ಎಂದು ರಶ್ಮಿಕ ಹೇಳಿದ್ದಾರೆ.



















































