
ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಾನು ಈವರೆಗೆ ಮುಖ್ಯಮಂತ್ರಿ ಸ್ಥಾನ ಖಾಲಿ ಆಗುತ್ತದೆ ಎಂದು ಎಲ್ಲೂ ಹೇಳಿಲ್ಲ. ನಾನು ಯಾವತ್ತೂ ಪಕ್ಷದ ಶಿಸ್ತು ಉಲ್ಲಂಘಿಸುವುದಿಲ್ಲ, ಅಧ್ಯಕ್ಷನಾಗಿ ಪಕ್ಷ ಕೊಲ್ಲುತ್ತಿದ್ದೀಯಾ ಎಂದು ಯಾರೂ ಬೆರಳು ತೋರಿಸಬಾರದು ಎಂಬಂತಿದ್ದೇನೆ. ನಮ್ಮ ಸ್ವಾರ್ಥಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು, ಪಕ್ಷಕ್ಕೆ ತೊಂದರೆ ಮಾಡಲು ನನಗೆ ಇಷ್ಟವಿಲ್ಲ ಎಂದು ಹೇಳಿದರು.
ನಾನು ಸ್ಟ್ರೀಟ್ ಫೈಟರ್. ಯಾವ ರೀತಿ ಹೋರಾಟ ಮಾಡಬೇಕು ಎಂದು ನನಗೆ ತಿಳಿದಿದೆ. ಅಧಿಕಾರಕ್ಕಾಗಿ, ಪಕ್ಷದ ಒಳಗೆ ನಾನು ಹೋರಾಟ ಮಾಡುತ್ತಿಲ್ಲ. ಏನಿದ್ದರೂ ಪಕ್ಷದ ಹೊರಗೆ ನನ್ನ ಹೋರಾಟ. ನಾನು ಸುಮ್ಮನಾಗಿದ್ದೇನೆ ಎಂದು ಭಾವಿಸಿದರೆ ಅದು ಅವರಿಗೆ ಬಿಟ್ಟ ವಿಚಾರ. ಇನ್ನು, ನಾನು ಏತಕ್ಕಾಗಿ ಕ್ರಾಂತಿ ಮಾಡಲಿ. ನನಗೆ ನನ್ನ ಮೇಲೆ ನಂಬಿಕೆಯಿದೆ. ನಾನು ಭರವಸೆ ಮೇಲೆ ಬದುಕುತ್ತೇನೆ ಎಂದರು.
ನಾನು ಈವರೆಗೆ ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಮಾತನಾಡಿಲ್ಲ. ಕೆಲ ನಿರ್ಧಾರ ಕೈಗೊಂಡಾಗ ನಾನು ಭಾಗಿಯಾಗಿದ್ದೆ ಎಂದು ಹೇಳಿರುವುದು ಬಿಟ್ಟರೆ ಉಳಿದಂತೆ ನಾನು ಯಾವುದೇ ಹೇಳಿಕೆ ನೀಡಿಲ್ಲ. ಮುಖ್ಯಮಂತ್ರಿ ಹುದ್ದೆ ಖಾಲಿಯಾಗುತ್ತದೆ, ಮುಖ್ಯಮಂತ್ರಿ ಸ್ಥಾನದಿಂದ ಇಳಿಯುತ್ತಾರೆ ಎಂದು ನಾನು ಯಾವತ್ತೂ ಮಾತನಾಡಿಲ್ಲ. ಮುಖ್ಯಮಂತ್ರಿ ಸ್ಥಾನ ಖಾಲಿ ಮಾಡಿಸಲು ಹೊರಟವರು ಬೇರೆಯವರಿದ್ದಾರೆ. ನಮ್ಮ ಸ್ವಾರ್ಥಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು, ಪಕ್ಷಕ್ಕೆ ತೊಂದರೆ ಮಾಡಲು ನನಗೆ ಇಷ್ಟವಿಲ್ಲ. ನಾವು ಕಟ್ಟಿ ಬೆಳೆಸಿರುವ ಪಕ್ಷವಿದು. ಲಕ್ಷಾಂತರ ಜನ ಕಾರ್ಯಕರ್ತರಿಗೆ ತೊಂದರೆಯಾಗಬಾರದು, ಅವರು ನಮ್ಮನ್ನು ಅಧಿಕಾರದಲ್ಲಿ ಕೂರಿಸಿದ್ದಾರೆ ಎಂಬುದು ತಿಳಿದಿದೆ ಎಂದು ಸ್ಪಷ್ಟಪಡಿಸಿದರು.






